ಬೆಂಗಳೂರು: ಕೊರೊನಾ ನಡುವೆಯೇ ರಾಜ್ಯದಲ್ಲಿ ಮಳೆಯಬ್ಬರ ಹೆಚ್ಚಾಗಿದೆ. ಯಾದಗಿರಿಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಚಾರ್ ಕಮಾನ್ ಬಳಿ ನೋಡನೋಡುತ್ತಿದ್ದಂತೆ ಹಳ್ಳದಲ್ಲಿ ಕಾರು ಕೊಚ್ಚಿಹೋಗಿದೆ.
ಕಲಬುರಗಿಯಲ್ಲಿ ಭಾರೀ ಮಳೆ ಕಾರಣ ದಾರಿ ಕಾಣದೇ ಸೇತುವೆಯೊಂದಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ನೀರಿಗೆ ಬಿದ್ದು ಕೊಚ್ಚಿ ಹೋಗ್ತಿದ್ದ ಕ್ಲೀನರ್‍ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ನಾಗರಾಳ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದ್ದು 8 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಕನಕಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಚಿಮ್ಮನಚೋಡ್-ಮನ್ನಾಖೇಳಿ ಪ್ರಮುಖ ರಸ್ತೆ ಸೇತುವೆ ಮುಳುಗಿದೆ.
ರಾಯಚೂರಲ್ಲಿ ಶಕ್ತಿನಗರದಿಂದ ಕರೇಕಲ್ ಕಾಡ್ಲೂರು, ಗುರ್ಜಾಪುರಿಗೆ ಹೋಗುವ ಮಾರ್ಗ ಕಡಿತ ಕಡಿತಗೊಂಡಿದೆ. ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿವೆ. ಮನೆಗಳು ಕುಸಿಯೋ ಭೀತಿ ಶುರುವಾಗಿದೆ. ಕರಾವಳಿಯಲ್ಲೂ ಭಾರೀ ಮಳೆಯಾಗ್ತಿದ್ದು ದಕ್ಷಿಣಕನ್ನಡ, ಉತ್ತರ ಕನ್ನಡದಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ. ಬೆಂಗಳೂರು, ಚಿಕ್ಕೋಡಿ, ದಾವಣಗೆರೆ, ಹಾವೇರಿ, ಕೊಡಗು, ಶಿವಮೊಗ್ಗ, ತುಮಕೂರು, ಮಂಡ್ಯ, ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿತ್ತು. ಬೆಳಗ್ಗೆಯಿಂದಲೇ ನಗರದ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿತ್ತು. ಮಧ್ಯಾಹ್ನದ ಬಳಿಕ ಮಳೆಯ ಅಬ್ಬರ ಹೆಚ್ಚಾಗಿತ್ತು. ಪೀಣ್ಯ, ಆರ್‍ಎಂಸಿ ಯಾರ್ಡ್, ಯಶವಂತಪುರ, ಜಾಲಹಳ್ಳಿ, ರಾಜಾಜಿನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರಂ, ಟೌನ್ ಹಾಲ್, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ.