– ಪ್ರತಿ ವರ್ಷ ಬರೆದರೂ ಪಾಸ್ ಆಗಿರಲಿಲ್ಲ
– ಇದೀಗ ಪರೀಕ್ಷೆ ಬರೆಯದಿದ್ದರೂ ಪಾಸ್
ಹೈದರಾಬಾದ್: ವ್ಯಕ್ತಿ ಸತತ 33 ವರ್ಷಗಳ ಕಾಲ ಪ್ರತಿ ವರ್ಷ ಇಂಗ್ಲಿಷ್ ಪರೀಕ್ಷೆ ಬರೆದರೂ ಪಾಸ್ ಆಗಿಲ್ಲ. ಆದರೆ ಇದೀಗ ಕೊರೊನಾ ಕಾರಣದಿಂದಾಗಿ ಪಾಸ್ ಆಗಿದ್ದು, ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ಕೊರೊನಾ ಸಾವಿರಾರು ಜನರನ್ನು ಬಲಿ ಪಡೆದಿದೆ. ಕೋಟ್ಯಂತರ ಜನರಿಗೆ ಸಮಸ್ಯೆ ತಂದೊಡ್ಡಿದೆ. ಆದರೆ ಕೊರೊನಾದಿಂದಾಗಿ ಇವರು ಮಾತ್ರ ಜಗತ್ತಿಲ್ಲೇ ಅತ್ಯಂತ ಸಂತಸದ ವ್ಯಕ್ತಿಯಾಗಿದ್ದಾರೆ. ಹೈದರಾಬಾದ್‍ನ 51 ವರ್ಷದ ಮೊಹಮ್ಮದ್ ನೂರುದ್ದಿನ್ 10ನೇ ತರಗತಿ ಪರೀಕ್ಷೆ ಪಾಸ್ ಮಾಡಲು 33 ವರ್ಷಗಳ ಕಾಲ ಸತತವಾಗಿ ಪ್ರಯತ್ನಿಸಿದ್ದಾರೆ. ಆದರೆ ಇಂಗ್ಲಿಷ್ ಪರೀಕ್ಷೆ ಪಾಸ್ ಆಗಿಲ್ಲ.
ಇದೀಗ ಅವರು ಪಾಸ್ ಆಗಿದ್ದು ಇದಕ್ಕೆ ಕಾರಣ ಕೊರೊನಾ. ಹಲವು ರಾಜ್ಯಗಳಲ್ಲಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ತೆಲಂಗಾಣದಲ್ಲಿ ಇದೇ ರೀತಿಯಾಗಿದ್ದು, ಪರೀಕ್ಷೆ ಬರೆಯದಿದ್ದರೂ ಎಲ್ಲ ಅಭ್ಯರ್ಥಿಗಳು ಪಾಸ್ ಎಂದು ಘೋಷಿಸಲಾಗಿದೆ. ಹೀಗಾಗಿ ನೂರುದ್ದಿನ್ 33 ವರ್ಷಗಳ ಬಳಿಕ 10ನೇ ತರಗತಿ ಪಾಸ್ ಆಗಿದ್ದಾರೆ. ಅದೂ ಸಹ ಪರೀಕ್ಷೆ ಬರೆಯದೆ.
ಮೊಹಮ್ಮದ್ ನೂರುದ್ದಿನ್ ಹೈದರಾಬಾದ್‍ನ ಮುಶೀರಾಬಾದ್ ಪ್ರದೇಶದಲ್ಲಿರುವ ಅಂಜುಮನ್ ಬಾಲಕರ ಪ್ರೌಢ ಶಾಲೆಯಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಮೊದಲ ಬಾರಿಗೆ 10ನೇ ತರಗತಿ ಪರೀಕ್ಷೆ ಎದುರಿಸಿದ್ದು 1987ರಲ್ಲಿ. ಆದರೆ ಇಂಗ್ಲಿಷ್ ವಿಷಯ ಫೇಲ್ ಆಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಇಂಗ್ಲಿಷ್ ಅವರಿಗೆ ಕಠಿಣವಾಗಿದ್ದ ಕಾರಣ ಪಾಸ್ ಮಾಡಲು ಸಾಧ್ಯವಾಗಿಲ್ಲ.
ಇದೀಗ ಕೊರೊನಾದಿಂದಾಗಿ ಇಂಗ್ಲಿಷ್ ಪಾಸ್ ಆಗಿದ್ದು, ಈ ಮೂಲಕ 10ನೇ ತರಗತಿಯನ್ನು 51ನೇ ವಯಸ್ಸಿನಲ್ಲಿ ಪಾಸ್ ಮಾಡಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಎಲ್ಲ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ತೆಲಂಗಾಣ ಸರ್ಕಾರ ಪರೀಕ್ಷೆಯನ್ನು ರದ್ದುಪಡಿಸಿದ್ದು, 10ನೇ ತರಗತಿಯ ಎಲ್ಲ ಅಭ್ಯರ್ಥಿಗಳು ಪರೀಕ್ಷೆ ಬರೆಯದಿದ್ದರೂ ಸಹ ಪಾಸ್ ಎಂದು ಘೋಷಿಸಿದೆ. ಹೀಗಾಗಿ ಮೊಹಮ್ಮದ್ ನೂರುದ್ದಿನ್ ಸಹ ಪಾಸ್ ಆಗಿದ್ದಾರೆ.