– ಮೃತಪಟ್ಟ ನಂತರ ಕೊರೊನಾ ಟೆಸ್ಟ್
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಗೆ ಮತ್ತೊಂದು ಬಲಿಯಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ವಿರಾಜಪೇಟೆ ಪಟ್ಟಣದ ನಿವಾಸಿ ಸೈಯದ್ ಇಸ್ಮಾಯಿಲ್ ಮೃತಪಟ್ಟ ವ್ಯಕ್ತಿ. ಸೈಯದ್ ಇಸ್ಮಾಯಿಲ್ ಕಳೆದ 3 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ನೀಡದೆ ಕೊರೊನಾ ಟೆಸ್ಟ್ ಕೂಡ ಮಾಡದೆ, ಕೇವಲ ಮಾತ್ರೆ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದೆ.
Advertisement
Advertisement
ಆದರೆ ಜ್ವರ ತೀವ್ರಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಅವರ ರಕ್ತ ಪರೀಕ್ಷೆ ನಡೆಸಲಾಗಿತ್ತು. ಅವರಿಗೆ ಡೆಂಗ್ಯೂ ಇದೆ ಎಂದು ವರದಿ ಬಂದಿತ್ತು. ಈ ಮಧ್ಯೆ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಗೆ ರ‍್ಯಾಪಿಡ್ ಕೋವಿಡ್ ಟೆಸ್ಟ್ ನಡೆಸುವಂತೆ ಮೃತ ವ್ಯಕ್ತಿಯ ಸಂಬಂಧಿಗಳು ಒತ್ತಾಯಿಸಿದ್ದರೂ ವೈದ್ಯರು ಟೆಸ್ಟ್ ಮಾಡುವುದಕ್ಕೆ ನಿರಾಕರಿಸಿದ್ದರು ಎಂದು ಸೋಂಕಿತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
Advertisement
Advertisement
ಶನಿವಾರ ರಾತ್ರಿ ವ್ಯಕ್ತಿಗೆ ಜ್ವರ ತೀವ್ರಗೊಂಡಿದ್ದರಿಂದ ಮತ್ತೆ ವಿರಾಜಪೇಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟೊತ್ತಿಗಾಗಲೇ ವ್ಯಕ್ತಿಗೆ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿಯೂ ವೈದ್ಯರು ನೋಡದೆ, ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹೀಗಾಗಿ ಮೃತ ವ್ಯಕ್ತಿಯ ಸಂಬಂಧಿಗಳು ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಇಸ್ಮಾಯಿಲ್ ಮೃತಪಟ್ಟಿದ್ದಾರೆ. ಬಳಿಕ ವೈದ್ಯರು ರ‍್ಯಾಪಿಡ್ ಟೆಸ್ಟ್ ನಡೆಸಿದಾಗ ಮೃತ ಸೈಯದ್ ಇಸ್ಮಾಯಿಲ್‍ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಒಟ್ಟಿನಲ್ಲಿ ವಿರಾಜಪೇಟೆ ತಾಲೂಕು ಆಸ್ಪತ್ರೆ ವೈದ್ಯರು ಶುಕ್ರವಾರವೆ ಕೊರೊನಾ ಟೆಸ್ಟ್ ಮಾಡಿದರೆ. ಮೃತ ವ್ಯಕ್ತಿ ಬದುಕುತ್ತಿದ್ದರು. ನಾವೇ ಕೇಳಿದರೂ ಕೋವಿಡ್ ಟೆಸ್ಟ್ ನಡೆಸದೆ ನಿರ್ಲಕ್ಷ್ಯವಹಿಸಿದ್ದೇ ತಮ್ಮ ಸಂಬಂಧಿ ಸಾವನ್ನಪ್ಪಲು ಕಾರಣ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.