ರಾಯಚೂರು: ಸರ್ಕಾರ, ಜಿಲ್ಲಾಡಳಿತ ಎಷ್ಟೇ ಕಠಿಣ ಲಾಕ್ ಡೌನ್ ಜಾರಿಗೊಳಿಸಿದರೂ ಜಿಲ್ಲೆಯಲ್ಲಿ ಜನರ ಓಡಾಟಕ್ಕೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಸಾರ್ವಜನಿಕರು ಜಾಗೃತಗೊಳ್ಳದ ಹಿನ್ನೆಲೆ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ ನಗರದ ಯುವಕರ ತಂಡವೊಂದು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಧಾರ್ಮಿಕ ಸ್ಥಳಗಳಲ್ಲಿನ ಧ್ವನಿವರ್ಧಕಗಳನ್ನೇ ಬಳಸಿಕೊಂಡು ದೇವಾಲಯ, ಮಸೀದಿ, ಚರ್ಚ್ ಸುತ್ತಮುತ್ತ ಓಡಾಡುವ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ‘ವಿ ಫಾರ್ ಯು’ ಯುವಕರ ತಂಡ ಕೊರೊನಾ ಕುರಿತು ಜಾಗೃತಿ ಮೂಡಿಸುವ ಒಂದು ನಿಮಿಷದ ಆಡಿಯೋ ತುಣುಕನ್ನು ಸಿದ್ಧ ಮಾಡಿಕೊಂಡಿದ್ದು ಧ್ವನಿವರ್ಧಕ ಮೂಲಕ ಬಿತ್ತರಿಸುತ್ತಿದ್ದಾರೆ.
Advertisement
ಸಾಮಾನ್ಯವಾಗಿ ಪ್ರವಚನ, ಭಕ್ತಿ ಗೀತೆ, ಧಾರ್ಮಿಕ ಸಂದೇಶಗಳಿಗೆ ಬಳಕೆಯಾಗುತ್ತಿದ್ದ ಧ್ವನಿವರ್ಧಕಗಳು ರಾಯಚೂರಿನಲ್ಲಿ ಈಗ ಕೊರೊನಾ ಜಾಗೃತಿ ಮೂಡಿಸಲು ಬಳಕೆಯಾಗುತ್ತಿವೆ. ಕೊರೊನಾ ಹರಡುವಿಕೆ ಸರಪಳಿ ತಡೆಯಲು ಸರ್ಕಾರದ ಜೊತೆ ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
Advertisement
Advertisement
ನಗರದ ‘ವಿ ಫಾರ್ ಯು’ ಸಮಾನ ಮನಸ್ಕ ಯುವಕರ ತಂಡ ಧಾರ್ಮಿಕ ಸ್ಥಳಗಳಿಂದ ಹೊರ ಬರುವ ಸಂದೇಶಗಳಿಗೆ ಜನ ಹೆಚ್ಚು ಮನ್ನಣೆ ಕೊಡುತ್ತಾರೆ ಅನ್ನೋ ಉದ್ದೇಶದಿಂದ ಅಲ್ಲಿನ ಧ್ವನಿವರ್ಧಕಗಳನ್ನ ಬಳಸಿಕೊಂಡು ಜಾಗೃತಿ ಮೂಡಿಸುತ್ತಿದೆ. ನಮ್ಮ ಪ್ರಯತ್ನಕ್ಕೆ ದೇವಾಲಯ, ಚರ್ಚ್, ಮಸೀದಿ ಪ್ರಮುಖರು ಬೆಂಬಲ ನೀಡಿದ್ದು ಜನ ಮೆಚ್ಚುಗೆಗೂ ಪಾತ್ರವಾಗಿದೆ. ಅಧಿಕಾರಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ ಅಂತ ತಂಡದ ಮುಖ್ಯಸ್ಥ ಅಮಿತ್ ದಂಡಿನ್ ತಿಳಿಸಿದ್ದಾರೆ.
Advertisement
ಕೊರೊನಾ ಜಾಗೃತಿ ಮೂಡಿಸುವುದರ ಜೊತೆಗೆ ಈ ಯುವಕರ ತಂಡ ನಗರದಲ್ಲಿ ಕೋವಿಡ್ ಕಾಲ್ ಸೆಂಟರ್ ಆರಂಭಿಸಿದ್ದು, ನುರಿತ ವೈದ್ಯರಿಂದ ದಿನದ 10 ಗಂಟೆ ಸಮಾಲೋಚನೆಗೆ ವ್ಯವಸ್ಥೆ, ಚುಚ್ಚುಮದ್ದು ಕೇಂದ್ರಗಳ ಮಾಹಿತಿ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆಯ ವ್ಯವಸ್ಥೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ದಾನಿಗಳ ಸಹಾಯದಿಂದ ಸೋಂಕಿತರಿಗೆ ಉಚಿತ ಊಟ, ಉಪಹಾರವನ್ನೂ ನೀಡುತ್ತಿದ್ದಾರೆ.