– ರಾಜ್ಯದ ಜನತೆಯಲ್ಲಿ ಆರೋಗ್ಯ ಸಚಿವ ಮನವಿ
– ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಶೀಘ್ರವೇ ಭೇಟಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ನಿಟ್ಟಿನಲ್ಲಿ ವೈಜ್ಞಾನಿಕ ನೆಲೆಗಟ್ಟು, ಸೋಂಕು ನಿಯಂತ್ರಣ, ಚಿಕಿತ್ಸೆ ವ್ಯವಸ್ಥೆ ಅಧ್ಯಯನ ಮಾಡಿ ಬಿಗಿ ನಿಯಮ ತರಲಾಗಿದೆ. ಈ ಮಾರ್ಗಸೂಚಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕಠಿಣ ನಿಯಮ ಜಾರಿಗೆ ತರಲಾಗಿದೆ. ಒಂದು ಚೈನ್ ಮುರಿಯಲು ಕನಿಷ್ಟ 14 ದಿನ ಬೇಕು. ಹಾಗಾಗಿ 14 ದಿನ ಬಿಗಿಯಾದ ನಿಯಮಗಳ ಜಾರಿ ಮಾಡಲಾಗಿದ್ದು, ಜನ ಮಾರ್ಗಸೂಚಿಯನ್ವಯ ನಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ರಾಜ್ಯದ ಜನತೆಯೊಂದಿಗೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸಕ್ರಿಯ ಸೋಂಕಿತರಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡುವ ವ್ಯವಸ್ಥೆ ಈಗಾಗಲೇ ಮಾಡಲಾಗುತ್ತಿದ್ದು, ರೆಮೆಡಿಸಿವಿರ್, ಐಸಿಯು, ಬೆಡ್, ಆಕ್ಸಿಜನ್ ಲಭ್ಯತೆ ಹೆಚ್ಚು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ವೇತನ, ಜವಾಬ್ದಾರಿ ಕೊಡುತ್ತೇವೆ. ಬೆಂಗಳೂರಿನ ಎಂಟು ವಲಯಗಳಲ್ಲಿ ಉಸ್ತುವಾರಿ ಸಚಿವರು ನೇತೃತ್ವ ವಹಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ನಾನ್ ಕೋವಿಡ್ ರೋಗಿಗಳ ಡಿಸ್ಚಾರ್ಜ್ ಮಾಡಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕೆಲವು ಆಸ್ಪತ್ರೆಗಳ ನಿರ್ದೇಶಕರ ಜೊತೆಗೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ. ಎಲ್ಲ ಪ್ರತಿಪಕ್ಷ ನಾಯಕರೂ ಸರ್ಕಾರಕ್ಕೆ ಬೆಂಬಲ ಕೊಟ್ಟಿದಾರೆ ಅವರೆಲ್ಲರಿಗೂ ಧನ್ಯವಾದಗಳು. ಸಿಎಂ ಕೈ ಬಲಪಡಿಸಲು ಎಲ್ಲ ನಾಯಕರೂ ನೈತಿಕವಾಗಿ ಜೊತೆಗಿದ್ದಾರೆ. ಜನ ಭಯಪಡುವ ಅಗತ್ಯ ಇಲ್ಲ. ಪ್ರತಿಯೊಬ್ಬರಿಗೂ ಆಸ್ಪತ್ರೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರು ಆಸ್ಪತ್ರೆಗೆ ದಾಖಲಾಗಬೇಕು, ಯಾರು ಆಗಬಾರದು ಎಂದು ಸಂಜೆ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ.
ಇವತ್ತು ಸಹ ಸಭೆ ಮಾಡುತ್ತೇವೆ ಕಂದಾಯ ಸಚಿವರು, ಗೃಹ ಸಚಿವರ ಜೊತೆ ಸಭೆ ನಡೆಯಲಿದ್ದು, ಐದು ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಭೆ ನಡೆಸಲಿದ್ದೇವೆ. ನಾಳೆ ಪೂರ್ತಿ ದಿನ ಮೈಸೂರಲ್ಲಿರುತ್ತೇನೆ. ರಾಜ್ಯದ ಏಳು ಸೋಂಕು ಹೆಚ್ಚಿರುವ ಜಿಲ್ಲೆಗಳಿಗೂ ಹೋಗುತ್ತೇನೆ. ಹೊಸ ಮಾರ್ಗಸೂಚಿಗಳಿಂದ ಚೈನ್ ಲಿಂಕ್ ಕಟ್ ಮಾಡಬಹುದು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.