– ಇದೊಂದು ಹೆಮ್ಮೆಯ ವಿಚಾರವೆಂದ ಸಚಿವರು
ತಿರುವನಂತಪುರಂ: ಕೊರೊನಾ ವಿರುದ್ಧದ ಹೋರಾಟದಲ್ಲಿ 110 ವರ್ಷದ ಅಜ್ಜಿ ಗೆಲುವು ಸಾಧಿಸಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಲಪ್ಪುರಂ ಜಿಲ್ಲೆಯ ರಂದಾಥನಿ ವರಿಯಾಥ್ ಪಥು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಉತ್ತರ ಕೇರಳದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದವರ ಪೈಕಿ ಹಿರಿಯ ವ್ಯಕ್ತಿಯಾಗಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸಂತಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 18ರಂದು 110 ವರ್ಷದ ಅಜ್ಜಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಜ್ಜಿ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿದ್ದಾರೆ. ಪಥು ಅವರಿಗೆ ಮಗಳಿಂದ ಕೊರೊನಾ ಸೋಂಕು ತಗುಲಿತ್ತು. ಅವರಿಗೆ ಸಣ್ಣ ಪ್ರಮಾಣದ ಗುಣಲಕ್ಷಣಗಳಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.
ಇಷ್ಟೊಂದು ವಯಸ್ಸಾದ ಅಜ್ಜಿಗೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಿಬ್ಬಂದಿ ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ಅವರನ್ನು ಮೆಚ್ಚಲೇಬೇಕು ಎಂದು ಆರೋಗ್ಯ ಸಚಿವೆ ವೈದ್ಯರಿಗೆ ಶುಭ ಕೊರಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದಲ್ಲಿ ರಾಜ್ಯದ ಆರೋಗ್ಯ ಇಲಾಖೆಗೆ ಇದೊಂದು ಹೆಮ್ಮೆಯ ವಿಚಾರವಾಗಿದೆ ಎಂದು ಸಚಿವೆ ಶೈಲಜಾ ತಿಳಿಸಿದ್ದಾರೆ.
ಪಥು ಅವರನ್ನು ಉಳಿಸಿದ್ದಕ್ಕೆ ಕುಟುಂಬಸ್ಥರು ಸಹ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಅಜ್ಜಿಯನ್ನು ಮನೆಯಲ್ಲೇ ಕಾಳಜಿಯಿಂದ ನೋಡಿಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಈ ಹಿಂದೆ 105 ವರ್ಷದ ಮಹಿಳೆ ಹಾಗೂ 103 ವರ್ಷದ ಪುರುಷ ಕೊರೊನಾದಿಂದ ಗುಣಮುಖರಾಗಿದ್ದರು. ಇದೀಗ 110 ವರ್ಷದ ಅಜ್ಜಿ ಗುಣಮುಖರಾಗಿದ್ದಾರೆ.