ಮಂಡ್ಯ: ಕೆರೆಗಳ ನಿರ್ಮಾಣದ ಮೂಲಕ ಪ್ರಸಿದ್ಧಿ ಪಡೆದಿರುವ ಮಂಡ್ಯದ ಕಾಮೇಗೌಡರು ಕೊರೊನಾ ಜಯಿಸಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರು, ಗ್ರಾಮದಲ್ಲಿ ಕೆರೆ, ಕಟ್ಟೆಗಳನ್ನು ನಿರ್ಮಿಸಿ ಪ್ರಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ಮನ್ ಕೀ ಬಾತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಕಾಮೇಗೌಡರ ಕೆರೆ ಕಟ್ಟು ಕಾಯಕದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು.
ಕಳೆದ ಹತ್ತು ದಿನಗಳ ಹಿಂದೆ ಕಾಮೇಗೌಡರು ಆಸ್ಪತ್ರೆಗೆ ದಾಖಲಾಗಿದ್ದರು. ಕಾಲು ನೋವಿನಿಂದ ಬಳಲುತ್ತಿದ್ದ ಕಾಮೇಗೌಡರು ಆಸ್ಪತ್ರೆಗಳಿಗೆ ಓಡಾಡುತ್ತಿದ್ದ ವೇಳೆ ಕೊರೊನಾ ಸೋಂಕು ತಗುಲಿತ್ತು. ಮಂಡ್ಯ ಕೋವಿಡ್-19 ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಕಾಮೇಗೌಡರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಕಾಮೇಗೌಡರು, ಸಾಮಾಜಿಕ ಕಳಕಳಿ ತೋರಿದ್ದಾರೆ. ಯಾವುದೇ ಆಕಾಂಕ್ಷೆ ಇಲ್ಲದೇ 16 ಕೆರೆಗಳನ್ನು ನಿರ್ಮಿಸಿದ್ದ ಕಾಮೇಗೌಡರು ಉಸಿತ ಬಸ್ ಪಾಸ್ ಕೇಳಿದ್ದರು. ಬಸ್ ಪಾಸ್ ಸಿಕ್ಕರೇ ಅಕ್ಕಪಕ್ಕದ ಜಿಲ್ಲೆಗಳ ದೇವಾಲಯಗಳಿಗೆ ಭೇಟಿ ನೀಡಬಹುದು ಎಂಬುವುದು ಅವರ ಚಿಂತನೆಯಾಗಿತ್ತು. ಇತ್ತೀಚೆಗೆ ಕೆಎಸ್‍ಆರ್‍ಟಿಸಿಯಿಂದ ಅವರಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ.