ಚೆನ್ನೈ: ಹಿರಿಯ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಅವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಆಗಿದೆ ಎಂದು ಎಸ್‍ಪಿಬಿ ಅವರ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಚರಣ್ ಅವರು, ನನ್ನ ತಂದೆಗಾಗಿ ನಿಮ್ಮ ನಿರಂತರ ಬೆಂಬಲ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದ. ತಂದೆ ಅವರ ಆರೋಗ್ಯ ಮತ್ತಷ್ಟು ಉತ್ತಮವಾಗಿದ್ದು, ಸ್ಥಿರವಾಗಿದೆ. ಅವರ ಕೊರೊನಾ ವರದಿಯೂ ನೆಗೆಟಿವ್ ಬಂದಿದ್ದು, ನಿರಂತರವಾಗಿ ಈ ಕುರಿತ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
Advertisement
Advertisement
ನಿನ್ನೆಯೇ ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಗೀತಾ ಸಾಹಿತಿ ಕೆ ಕಲ್ಯಾಣ್ ಅವರು, ಎಸ್‍ಪಿಬಿ ಬಾಲ್ಯದ ಸ್ನೇಹಿತ ಒಬಯ್ಯ ಅವರ ಜೊತೆ ನಾನು ಮಾತನಾಡಿದೆ. ಎರಡು ಬಾರಿ ಕರೆ ಮಾಡಿ ಮಾಹಿತಿಯನ್ನು ಖಚಿತ ಪಡಿಸಿದೆ. ವರದಿ ನೆಗೆಟಿವ್ ಬಂದಿದೆ ಎಂಬುದನ್ನು ತಿಳಿಸಿದರು ಎಂದು ಮಾಹಿತಿ ನೀಡಿದ್ದರು. ಎಸ್‍ಪಿಬಿ ಅವರು ಕೊರೊನಾ ಗೆದ್ದು ಬರಲಿ ಎಂದು ವಿಶ್ವದೆಲ್ಲೆಡೆ ಪ್ರಾರ್ಥನೆಗಳು ನಡೆದಿತ್ತು. ಈಗ ಗುಣಮುಖರಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
Advertisement
Advertisement
ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು.
ಎಸ್‍ಪಿಬಿಯವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದು ಅವರು ಬೇಗ ಗುಣಮುಖರಾಗಲಿ ಎಂದು ಇಡೀ ದೇಶಾದ್ಯಂತ ಅವರ ಅಭಿಮಾನಿಗಳು ಪ್ರಾರ್ಥನೆ ಶುರು ಮಾಡಿದ್ದಾರೆ. ಜೊತೆಗೆ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಹುಷಾರಾಗಲಿ ಎಂದು ಬೇಗ ಗುಣಮುಖರಾಗಿ ಎಸ್‍ಪಿಬಿ ಸರ್ ಎಂದು ಗುರುವಾರ ಟ್ಟಿಟ್ಟರ್ ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಸೆಲೆಬ್ರಿಟಿಗಳು ಸೇರಿದಂತೆ ಎಸ್‍ಪಿಬಿಯವರ ಸಾವಿರಾರು ಅಭಿಮಾನಿಗಳು ಟ್ವೀಟ್ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.