ಹುಬ್ಬಳ್ಳಿ: ಕೊರೊನಾ ಇಡೀ ಜಗತ್ತನೇ ನಡುಗಿಸಿದೆ. ಕೊರೊನಾ ಬಂದ್ರೆ ತಾವು ಎಲ್ಲಿ ಸತ್ತು ಹೋಗುತ್ತೇಯೋ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ 90 ವರ್ಷದ ವೃದ್ಧೆ ಕೊರೊನಾದಿಂದ ವಾಸಿಯಾಗುವ ಮೂಲಕವಾಗಿ ಆಶಾಭಾವನೆ ಮೂಡಿಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಬಡಾವಣೆಯ ಮಧುರಾ ಎಸ್ಟೇಟ್ ನ ನಿವಾಸಿ ಹೊನಮ್ಮ ಎಂಬ 90 ವರ್ಷದ ವೃದ್ದೆ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ. ಎರಡನೇ ಅಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಇದರ ನಡುವೇ ವಯೋವೃದ್ಧ ಅಜ್ಜಿಯೊಬ್ಬರು ಕೊರೊನಾ ಗೆದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ 9 ದಿನಗಳ ಹಿಂದೆ ಹಳೇ ಹುಬ್ಬಳ್ಳಿಯ ಸಂಜೀವಿನಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಕೋವಿಡ್ ವಾರ್ಡ ದಾಖಲಾಗಿದ್ದ ವೃದ್ದೆ, ಉಸಿರಾಟ ತೊಂದರೆ ಆಗಿ ವೆಂಟಿಲೇಟರ್ ಮೇಲೆ ಎರಡು ದಿನ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ. ವೃದ್ದೆಗೆ ಸಂಜೀವಿನಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರಾದ ದೀಪಕ ಕಲಾದಗಿ ಹಾಗೂ ಆಸ್ಪತ್ರೆಯ ಇತರೆ ವೈದ್ಯರು ಹಾಗೂ ಸಿಬ್ಬಂದಿಗಳು ವಿಶೇಷ ಆರೈಕೆ ಮಾಡಿದ ಪರಿಣಾಮ 90 ವರ್ಷದ ವೃದ್ದೆ ಶ್ರೀಘ್ರವಾಗಿ ಗುಣಮುಖರಾಗಿದ್ದಾರೆ. ಇದನ್ನೂ ಓದಿ: ಕೊರೊನಾ ಗೆದ್ದ 105 ವರ್ಷದ ಅಜ್ಜಿ
ಕೊರೊನಾ ಸುಳಿಗೆ ಸಿಲುಕಿ ವಯಸ್ಸಿನ ಯುವಕರೇ ಕೊನೆಯುಸಿರೆಳೆಯುತ್ತಿರುವಾಗ ಈ ಅಜ್ಜಿ ಇಳಿವಯಸ್ಸಿನಲ್ಲಿ ಕೊರೊನಾ ದಿಂದ ಗುಣಮುಖರಾಗುವ ಮೂಲಕ ಇತರರಿಗೂ ಆಶಾ ಭಾವನೆ ಮೂಡಿಸಿದ್ದಾರೆ. ಧೈರ್ಯವಿದ್ರೆ ಕೊರೊನಾ ಗೆಲ್ಲಬಹುದು ಎಂಬುದು ಸಾಬೀತು ಮಾಡಿದ್ದಾರೆ. ಡಾ. ದೀಪಕ ಕಲಾದಗಿ ಹಾಗೂ ಅವರ ಸಿಬ್ಬಂದಿ ಶ್ರಮ ಸಾರ್ಥಕವಾಗಿದೆ.