ಕೊರೊನಾ ಕೇಸ್‌ ಇಳಿಯುತ್ತಿಲ್ಲ, ಕೇರಳದಲ್ಲಿ ಪತ್ತೆಯಾಗಿದೆ ಝಿಕಾ‌ ವೈರಸ್ – ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್‌

Public TV
4 Min Read
ZIKA

ತಿರುವನಂತಪುರಂ: ಒಂದೆಡೆ ಇನ್ನೂ ನಿಯಂತ್ರಣಕ್ಕೆ ಬಾರದ ಕೊರೊನಾ ವೈರಸ್‌, ಇನ್ನೊಂದೆಡೆ ಹೊಸ ವೈರಸ್‌ ಕಾಟ ಕೇರಳ ರಾಜ್ಯವನ್ನು ಕಾಡತೊಡಗಿದೆ. ಕೇರಳದಲ್ಲಿ ಇದೇ ಮೊದಲ ಬಾರಿಗೆ ಝಿಕಾ ವೈರಸ್‌ (Zika Virus) ಪತ್ತೆಯಾಗಿದ್ದು, ಗರ್ಭಿಣಿಯೊಬ್ಬರ ಟೆಸ್ಟ್‌ ರಿಪೋರ್ಟ್‌ ಪಾಸಿಟಿವ್‌ ಬಂದಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ. ಕೇರಳದಲ್ಲಿ ಇಂದು 13,772 ಪ್ರಕರಣಗಳು ಪತ್ತೆಯಾಗಿದ್ದು, 142 ಮಂದಿ ಸಾವನ್ನಪ್ಪಿದ್ದಾರೆ. ಕೇರಳದ ಟೆಸ್ಟ್‌ ಪಾಸಿಟಿವಿಟಿ ರೇಟ್‌ 10.83 ಇದೆ. ಇದರ ಬೆನ್ನಲ್ಲೆ ಝಿಕಾ ವೈರಸ್‌ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.

ತಿರುವನಂತಪುರನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಪಾರಶಾಲ ಎಂಬಲ್ಲಿಯ 24 ವರ್ಷದ ಗರ್ಭಿಣಿಯಲ್ಲಿ ಝಿಕಾ ವೈರಸ್‌ ಪತ್ತೆಯಾಗಿದೆ. ಕಳೆದ ಜೂನ್‌ 28ರಂದು ಈ ಮಹಿಳೆಗೆ ಜ್ವರ, ತಲೆನೋವು ಕಾಣಿಸಿಕೊಂಡಿತ್ತು. ಈ ವೇಳೆ ನಡೆದ ವೈದ್ಯ ಪರಿಶೋಧನೆಯಲ್ಲಿ ಝಿಕಾ ಆರಂಭಿಕ ಹಂತ ಕಾಣಿಸಿಕೊಂಡಿತ್ತು. ಬಳಿಕ ಇವರ ಸ್ಯಾಂಪಲನ್ನು ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ (NIV) ಗೆ ಕಳಿಸಲಾಗಿತ್ತು. ಇದರ ವರದಿ ಬಂದಿದ್ದು, ಈ ಗರ್ಭಿಣಿಯ ಸ್ಯಾಂಪಲ್‌ ಪಾಸಿಟಿವ್‌ ಆಗಿದೆ. ಇದನ್ನೂ ಓದಿ: ಬ್ಲ್ಯಾಕ್ ಫಂಗಸ್‍ಗೆ ಬೆಂಗಳೂರಿನಲ್ಲಿ 11ರ ಬಾಲಕ ಸಾವು

zika a

ಸದ್ಯ ಈ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು ಜುಲೈ 7ರಂದು ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಇವರು ರಾಜ್ಯವನ್ನು ಬಿಟ್ಟು ಬೇರೆಲ್ಲೂ ಪ್ರಯಾಣ ಮಾಡಿಲ್ಲ. ಇವರ ಮನೆ ಕೇರಳ ತಮಿಳುನಾಡು ಗಡಿಭಾಗದಲ್ಲಿದೆ. ಒಂದು ವಾರ ಹಿಂದೆ ಈ ಮಹಿಳೆಯ ತಾಯಿಯಲ್ಲೂ ಇದೇ ಗುಣ ಲಕ್ಷಣಗಳು ಕಾಣಿಸಿಕೊಂಡಿತ್ತು.

ಇದಲ್ಲದೆ ಇದೇ ಗುಣಲಕ್ಷಣಗಳು ಕಾಣಿಸಿಕೊಂಡ ತಿರುವನಂತಪುರಂ ಜಿಲ್ಲೆಯ 19 ಜನರ ಸ್ಯಾಂಪಲ್‌ ಕೂಡಾ ಪುಣೆ ಎನ್‌ಐವಿಗೆ ರವಾನೆಯಾಗಿದೆ. ಇದರಲ್ಲಿ 13 ಸ್ಯಾಂಪಲ್‌ ಪಾಸಿಟಿವ್‌ ಆಗುವ ಸಾಧ್ಯತೆಯಿದೆ. ಆದರೆ ಇದರ ಖಚಿತ ಫಲಿತಾಂಶ ಇನ್ನಷ್ಟೇ ಬರಬೇಕಿದೆ ಎಂದು ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

Zika

ಆರಂಭಿಕ ಹಂತದಲ್ಲೇ ಆರೋಗ್ಯ ಇಲಾಖೆ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈಗ ವೈರಸ್‌ ಕಾಣಿಸಿಕೊಂಡ ಸ್ಥಳದಿಂದ ಈಡಿಸ್‌ ಸೊಳ್ಳೆಗಳನ್ನು ಪಿಸಿಆರ್‌ ಟೆಸ್ಟ್‌ಗೆ ಸ್ಯಾಂಪಲ್‌ ಸಂಗ್ರಹಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಜಿಲ್ಲೆಗಳಲ್ಲೂ ಅಲರ್ಟ್‌ ಆಗಿರುವಂತೆ ನಿರ್ದೇಶನ ನೀಡಲಾಗಿದೆ.

Zika Virus (ಝಿಕಾ ವೈರಸ್)‌ ಬರುವುದು ಹೇಗೆ?: ಇದು ಸೊಳ್ಳೆಗಳಿಂದ ಹರಡುವ ವೈರಸ್.‌ ಈಡಿಸ್‌ ಸೊಳ್ಳೆಗಳೇ ಝಿಕಾ ವೈರಸ್‌ನ ಮೂಲಕಾರಣ. ಸಾಧಾರಣವಾಗಿ ಹಗಲುಹೊತ್ತಿನಲ್ಲೇ ಈ ಸೊಳ್ಳೆಗಳು ಕಡಿಯುತ್ತವೆ.

Zika

ರೋಗ ಲಕ್ಷಣಗಳೇನು?: ಜ್ವರ, ತಲೆ ನೋವು, ಕೀಲು ನೋವು, ಸ್ನಾಯು ನೋವು ಇದರ ಪ್ರಮುಖ ಲಕ್ಷಣಗಳು. ಸಾಧಾರಣವಾಗಿ 2ರಿಂದ 7 ದಿನಗಳ ಕಾಲ ಈ ಲಕ್ಷಣ ಕಾಣಿಸುತ್ತದೆ. ಸೊಳ್ಳೆ ನಿಮ್ಮನ್ನು ಕಚ್ಚಿದ ತಕ್ಷಣ ಲಕ್ಷಣಗಳು ಕಾಣಿಸಲ್ಲ. ಆದರೆ 3ರಿಂದ 12 ದಿನಗಳ ಅವಧಿಯೊಳಗೆ ದೇಹ ಹೊಕ್ಕ ವೈರಸ್‌ ಗುಣಲಕ್ಷಣಗಳನ್ನು ತೋರಿಸಲು ಆರಂಭಿಸುತ್ತದೆ. ಈ ವೈರಸ್‌ ಬಾಧಿಸಿದರೆ ಮರಣವನ್ನಪ್ಪುವ ಸಾಧ್ಯತೆ ತೀರಾ ಕಡಿಮೆ.

ಆದರೆ ಗರ್ಭಿಣಿಯರು ಎಚ್ಚರದಿಂದಿರಬೇಕು. ಗರ್ಭಾವಸ್ಥೆಯ ವೇಳೆ ಝಿಕಾ ವೈರಸ್‌ ಕಾಣಿಸಿದರೆ ಹುಟ್ಟುವ ಮಗು ಅಂಗವೈಕಲ್ಯಕ್ಕೀಡಾಗಬಹುದು. ಕೆಲವೊಮ್ಮೆ ಗರ್ಭಪಾತಕ್ಕೂ ಕಾರಣವಾಗಬಹುದು. ಮಕ್ಕಳು ಹಾಗೂ ಹಿರಿಯರಿಗೆ ವೈರಸ್‌ ತಗುಲಿದರೆ ನರ ಸಂಬಂಧಿತ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ.

ZIKA 6 medium

ಔಷಧವಿಲ್ಲ, ಆದರೆ ಎಚ್ಚರವಿರಲಿ..!: ಸದ್ಯ ಝಿಕಾ ವೈರಸ್‌ ಬಾಧಿಸಿದರೆ ರೋಗ ನಿಯಂತ್ರಣಕ್ಕೆ ಅಥವಾ ಚಿಕಿತ್ಸೆಗೆ ಯಾವುದೇ ಔಷಧಿ ಲಭ್ಯವಿಲ್ಲ. ಆದರೆ ರೋಗ ಲಕ್ಷಣ ಇರುವವರಿಗೆ ಸಾಕಷ್ಟು ವಿಶ್ರಾಂತಿ ಅಗತ್ಯ. ಹೆಚ್ಚು ನೀರು ಕುಡಿಯಬೇಕು. ಇಷ್ಟು ಮಾಡಿದ ಮೇಲೂ ರೋಗ ಲಕ್ಷಣ ಕಡಿಮೆಯಾಗದಿದ್ದರೆ ಚಿಕಿತ್ಸೆಗೆ ವೈದ್ಯರನ್ನು ಭೇಟಿಯಾಗಲೇಬೇಕು. ಝಿಕಾ ಬಾಧಿತ ಪ್ರದೇಶಗಳಲ್ಲಿ ಗರ್ಭಿಣಿಯರಿದ್ದರೆ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ಮಾಡುವುದು ಒಳಿತು. ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದೇ ಝಿಕಾ ವೈರಸ್‌ನಿಂದ ದೂರವಿರಲು ಪರಿಣಾಮಕಾರಿ ಆಯುಧ. ಸಾಧ್ಯವಾದಷ್ಟು ಮಕ್ಕಳು, ಗರ್ಭಿಣಿಯರು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯೊಳಗೆ ಬೆಳೆಸುವ ಸಸ್ಯಗಳು, ಫ್ರಿಡ್ಜ್‌ ಟ್ರೇಗಳನ್ನು ವಾರಕ್ಕೊಮ್ಮೆ ಕ್ಲೀನ್‌ ಮಾಡಿಕೊಳ್ಳಬೇಕು.

ZIKA 5 medium

ಝಿಕಾ ವೈರಸ್‌ ಎಲ್ಲಿಂದ ಬಂತು?: 1947ರಲ್ಲಿ ಉಗಾಂಡದಲ್ಲಿ ಕೋತಿಗಳಲ್ಲಿ ಮೊದಲ ಬಾರಿ ಝಿಕಾ ವೈರಸ್‌ ಪತ್ತೆಯಾಯಿತು. ಇದಾಗಿ 5 ವರ್ಷದ ಬಳಿಕ ಮನುಷ್ಯರಲ್ಲಿ ಝಿಕಾ ವೈರಸ್‌ ಕಾಣಿಸಿತು.

1960ರ ಬಳಿಕ ವಿಶ್ವದ ಹಲವೆಡೆ ಈ ವೈರಸ್‌ ವಿರಳವಾಗಿ ಕಾಣಿಸಿಕೊಂಡಿತು. 2007ರಲ್ಲಿ ಪೆಸಿಫಿಕ್‌ನ ಯಾಪ್‌ ದ್ವೀಪದಲ್ಲಿ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಝಿಕಾ ವೈರಸ್‌ ಪ್ರಕರಣಗಳು ಕಾಣಿಸಿಕೊಂಡಿತು. 2015ರಲ್ಲಿ ಬ್ರೆಜಿಲ್‌ನಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆಯದ ಸಣ್ಣ ಗಾತ್ರದ ತಲೆ ಹಾಗೂ ಮೆದುಳಿನ ಜೊತೆ ಮಕ್ಕಳು ಹುಟ್ಟಿದಾಗ ಈ ವೈರಸ್‌ನ ತೀವ್ರತೆ ಜಗತ್ತಿಗೆ ಅರಿವಾಯಿತು.

ZIKA 3 medium

ಭಾರತದಲ್ಲಿ ಕಾಣಿಸಿಕೊಂಡಿದ್ದು ಯಾವಾಗ?: 2017ರ ಮೇ 15ರಂದು ಗುಜರಾತ್‌ನ ಅಹಮದಾಬಾದ್‌ ಜಿಲ್ಲೆಯ ಬಾಪೂನಗರ ಪ್ರದೇಶದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದೆ ಎಂದು ಭಾರತದ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿತ್ತು.

2017ರ ಜುಲೈ ತಿಂಗಳಲ್ಲಿ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಇಲಾಖೆ, ಭಾರತದಲ್ಲಿ ಒಟ್ಟು 4 ಪ್ರಕರಣಗಳು ಪತ್ತೆಯಾಗಿದೆ. 4ನೇ ಪ್ರಕರಣ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಉತ್ತರ ನೀಡಿತ್ತು.

ZIKA 10 medium

ಇದಾದ ಬಳಿಕ 2018ರಲ್ಲಿ ರಾಜಸ್ಥಾನದ ಜೈಪುರದಲ್ಲಿ 80 ಜನರಲ್ಲಿ ಕಾಣಿಸಿಕೊಂಡಿತ್ತು. ಇದು ಭಾರತದಲ್ಲಿ ಇದುವರೆಗಿನ ಅತ್ಯಧಿಕ ಝಿಕಾ ವೈರಸ್ ಕಾಣಿಸಿಕೊಂಡ ಪ್ರಕರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *