ಕೊರೊನಾ ಔಟ್ ಆಫ್ ಕಂಟ್ರೋಲ್-ಕೇರಳಕ್ಕೆ ಕೇಂದ್ರದ ತಂಡ

Public TV
1 Min Read
corona test 2

ತಿರುವನಂತಪುರ: ಕೇರಳ ರಾಜ್ಯದಲ್ಲಿ ದಿನೇ ದಿನೇ ಹೊಸ ಕೋವಿಡ್-19 ಪ್ರಕರಣಗಳು ಹಠಾತ್ತನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ತಂಡವನ್ನು ಅತೀ ಶೀಘ್ರವೇ ರಾಜ್ಯಕ್ಕೆ ರವಾನಿಸಲು ನಿರ್ಧಾರ ಕೈಗೊಂಡಿದೆ.

kerala corona

ಕೇರಳದಲ್ಲಿ ಕೊರೊನಾ ಹೊಸ ಪ್ರಕರಣಗಳ ನಿರ್ವಹಣೆಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಆರೋಗ್ಯ ಕಾಪಾಡಲು ಈ ತಂಡವು ಕೇರಳ ರಾಜ್ಯ ಸರ್ಕಾರ ಮತ್ತು ಅಲ್ಲಿನ ಆರೋಗ್ಯ ಸಂಸ್ಥೆಗಳಿಗೆ ನೆರವು, ಬೆಂಬಲ ಮತ್ತು ಸಲಹೆ ಸೂಚನೆ ನೀಡಲಿದೆ. ಆರು ಉನ್ನತಾಧಿಕಾರಿಗಳಿರುವ ಈ ತಂಡವು ಕೇರಳಕ್ಕೆ ಸದ್ಯದಲ್ಲೇ ಭೇಟಿ ನೀಡಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‍ಸಿಡಿಸಿ)ದ ನಿರ್ದೇಶಕ ಡಾ.ಎಸ್.ಕೆ ಸಿಂಗ್ ನೇತೃತ್ವದ ತಂಡವು ಜುಲೈ 30ರಂದು ಕೇರಳಕ್ಕೆ ತೆರಳಲಿದ್ದು, ಕೊರೊನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳಿಗೆ ಭೇಟಿ ನೀಡಿ, ನಿಯಂತ್ರಣ ಕ್ರಮಗಳನ್ನು ಸೂಚಿಸಲಿದೆ. ಇದನ್ನೂ ಓದಿ: ಅಂದು ಮಾದರಿ ರಾಜ್ಯ – ಇಂದು ಕೇರಳದಲ್ಲಿ ದಾಖಲಾಗುತ್ತಿದೆ ದೇಶದ ಅರ್ಧದಷ್ಟು ಕೇಸ್

corona test 1 medium

ಕೇಂದ್ರದ ಉನ್ನಾಧಿಕಾರಿಗಳ ಈ ತಂಡವು ಕೇರಳದ ಆರೋಗ್ಯ ಇಲಾಖೆಗಳ ಜೊತೆ ನಿಕಟವಾಗಿ ಕೆಲಸ ಮಾಡಲಿದೆ. ಅಲ್ಲಿ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಪರಿಸ್ಥಿತಿಗಳ ಕುರಿತು ಪರಾಮರ್ಶೆ ನಡೆಸಿ, ಸಮಗ್ರ ಮಾಹಿತಿ ಕಲೆ ಹಾಕಿ, ಸಾರ್ವಜನಿಕ ಆರೋಗ್ಯ ಕಾಪಾಡಲು ಅಗತ್ಯವಾದ ಎಲ್ಲಾ ಸಲಹೆ ಸೂಚನೆ ಒಳಗೊಂಡ ಶಿಫಾರಸು ಮಾಡಲಿದೆ.

ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 1.54 ಲಕ್ಷಕ್ಕೆ ಏರಿಕೆಯಾಗಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕೇರಳ ರಾಜ್ಯವೊಂದರಲ್ಲೇ 37.1% ಪ್ರಮಾಣ ವರದಿಯಾಗಿದೆ. ಕಳೆದ 7 ದಿನಗಳಿಂದ ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ದೈನಂದಿನ 1.41% ಪ್ರಮಾಣದಲ್ಲಿ ಹೆಚ್ಚುತ್ತಿದೆ. ದೈನಂದಿನ ಸರಾಸರಿ 17,443 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಕೇರಳದಲ್ಲಿ ಒಟ್ಟಾರೆ ಪಾಸಿಟಿವಿಟಿ ದರ (ಹೊಸ ಸೋಂಕಿತರು) 12.93% ಏರಿಕೆ ಕಾಣುತ್ತಿದೆ, ವಾರದ ಪಾಸಿಟಿವಿಟಿ ದರ 11.97% ಗೆ ಏರಿಕೆಯಾಗಿದೆ. ಆರು ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ 10% ಗಿಂತ ಹೆಚ್ಚುಕಂಡುಬಂದಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಲಸಿಕೆ ಪಡೆಯುತ್ತಿರುವವರ ಪ್ರಮಾಣ ಕೂಡ ಕೇರಳದಲ್ಲಿ ಏರಿಕೆ ಕಾಣುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *