– ಸೋಂಕು ಹೆಚ್ಚಳ ಆದ್ರೆ ಮತ್ತೆ ಕಾಲೇಜ್ ಬಂದ್ ಮಾಡುತ್ತೇವೆ
ಧಾರವಾಡ: ಕೊರೊನಾ ಎರಡನೇ ಅಲೆ ವಿಶ್ವದಲ್ಲಿ ಎಲ್ಲ ಕಡೆ ಬರುತ್ತೆ ಮತ್ತು ಬಂದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಧಾರವಾಡದಲ್ಲಿ ಡಿಮಾನ್ಸ್ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ದೆಹಲಿ, ಅಹಮದಬಾದ್‍ನಲ್ಲಿ ಕೊರೊನಾ ಎರಡನೇ ಅಲೆ ಬಂದಿದೆ. ಕೊರೊನಾ ಎರಡನೇ ಅಲೆ ಬಂದೇ ಬರುತ್ತೇ ಎನ್ನುವುದೇನಿಲ್ಲ. ಅದು ನಮ್ಮ ಜನರ ನಡವಳಿಕೆ ಮೇಲೆ ಆಧಾರವಾಗಿದೆ ಎಂದರು.
ಮಾರ್ಗಸೂಚಿ ಅನ್ವಯ ನಡೆದುಕೊಂಡರೆ ಎರಡನೇ ಅಲೆ ಬರುವುದು ಕಡಿಮೆ. ಗಂಭೀರವಾಗಿ ತೆಗೆದುಕೊಂಡು ನಿಯಮ ಅನುಷ್ಠಾನಕ್ಕೆ ತರಬೇಕಿದೆ. ಜನ ಕೊರೊನಾ ಹೋಗಿದೆ ಎಂಬ ಭಾವನೆಯಲ್ಲಿದ್ದಾರೆ. ಲಸಿಕೆ ಸಿಗುವವರೆಗೂ ಕೊರೊನಾ ನಡವಳಿಕೆ ಸ್ವಾಭಾವಿಕವಾಗಿ ಬರಬೇಕು ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಸಿಎಂ ಹಾಗೂ ದೆಹಲಿಯ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಪದೇ ಪದೇ ಆ ಬಗ್ಗೆ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಕಾಲೇಜ್ ಆರಂಭದ ಬಳಿಕ ಸೋಂಕು ಹೆಚ್ಚಳ ವಿಚಾರವಾಗಿ ಮಾತನಾಡಿದ ಸುಧಾಕರ್, ರಾಜದಲ್ಲಿ 120 ರಿಂದ 130 ವಿದ್ಯಾರ್ಥಿಗಳಿಗೆ ಮಾತ್ರ ಕೊರೊನಾ ಬಂದಿದೆ ಎಂದು ಮಾಹಿತಿ ಇದೆ. ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ, ಅವರ ಶೈಕ್ಷಣಿಕ ಭವಿಷ್ಯ ರೂಪಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ಜವಾಬ್ದಾರಿ ಹಿನ್ನೆಲೆ ಕಾಲೇಜ್ ಆರಂಭ ಮಾಡಿದ್ದೇವೆ. ಸೋಂಕು ಹೆಚ್ಚಳ ಆದರೆ ಮತ್ತೆ ಕಾಲೇಜ್ ಬಂದ್ ಮಾಡುತ್ತೇವೆ ಎಂದರು.