-ಕರ್ನಾಟಕ, ಆಂಧ್ರ ಗಡಿಭಾಗಗಳಲ್ಲಿ ಬಾರ್‌ಗಳಾದ ಗುಡಿಸಲು..!
-ರೈತರ ತೋಟಗಳೇ ರೆಸ್ಟೋರೆಂಟ್‍ಗಳು..!
ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ. ಅದರಲ್ಲೂ ಕೊರೊನಾದಿಂದ ಶಾಲೆಗಳಿಗೆ ರಜೆ ಸಿಕ್ಕಿರುವುದರಿಂದ ಅಪ್ರಾಪ್ತ ವಯಸ್ಕಿನ ವಿದ್ಯಾರ್ಥಿಗಳೇ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ವಿಶ್ವವೇ ಕೊರೊನಾ ಸೋಂಕಿನ ಆತಂಕದಿಂದ ನಡುಗಿ-ನಲುಗಿ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಮಹಾನಗರವನ್ನು ಮತ್ತೆ ಲಾಕ್ ಡೌನ್ ಮಾಡೋ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಗ್ರಾಮೀಣ ಭಾಗಗಳಿಗೂ ಕೊರೊನಾ ಕಾಲಿಟ್ಟಿದ್ದು, ದಿನೇ ದಿನೇ ಹಳ್ಳಿಗಳಿಗೂ ಕೊರೊನಾ ವ್ಯಾಪಿಸುತ್ತಿದ್ದು ಜನ ಬೆಚ್ಚಿಬೀಳುವಂತೆ ಮಾಡುತ್ತಿದೆ. ಇದರ ನಡುವೆ ಮಕ್ಕಳಿಗೆ ಶಾಲೆ ತೆರೆದಿಲ್ಲ.
ಕೋವಿಡ್‍ನಿಂದಾಗಿ ಯಾವುದೇ ಆರ್ಥಿಕ ವಹಿವಾಟುಗಳ ವ್ಯಾಪಾರವೂ ಅಷ್ಟಕ್ಕಷ್ಟೇ. ಆದರೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಮಾತ್ರ ಜೋರಾಗಿ ಸಾಗಿದೆ. ಇಡೀ ದೇಶವೇ ಲಾಕ್‍ಡೌನ್ ಮಾಡಿ ಸಂದರ್ಭದಲ್ಲಿ ಮದ್ಯದಂಗಡಿಗಳು ಕೂಡ ಬಂದ್ ಆಗಿದ್ದವು. ಆದ್ರೆ ಈಗ ಎಲ್ಲಾ ಮದ್ಯದಂಗಡಿಗಳ ಬಾಗಿಲು ತೆರೆದಿದೆ. ಮದ್ಯಪ್ರಿಯರಿಗೆ ಯಾವುದೇ ಅಡ್ಡಿ ಇಲ್ಲ. ಈ ನಡುವೆ ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಆಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ.
ಕರ್ನಾಟಕ-ಆಂಧ್ರ ಗಡಿಭಾಗದ ಹಳ್ಳಿಗಳಲ್ಲಿ ಅಕ್ರಮ ಮದ್ಯದಂಗಡಿಗಳು ತಲೆ ಎತ್ತಿದ್ದು, ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಸಲಾಗುತ್ತಿದೆ. ರೈತರ ತೋಟ, ಹೊಲಗಳಲ್ಲೇ ತಾತ್ಕಾಲಿಕ ಗುಡಿಸಲುಗಳು, ಶೆಡ್‍ಗಳನ್ನು ನಿರ್ಮಾಣ ಮಾಡಿಕೊಂಡು ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದಲ್ಲಿದ್ದ ಮದ್ಯದಂಗಡಿಗಳನ್ನ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಅಲ್ಲದೇ ಮದ್ಯದ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮ ಆಂಧ್ರದಿಂದ ಕರ್ನಾಟಕಕ್ಕೆ ಮದ್ಯಪ್ರಿಯರು ಲಗ್ಗೆ ಇಡುತ್ತಿದ್ದಾರೆ.
ಇದನ್ನೇ ಅವಕಾಶ ಮಾಡಿಕೊಂಡು ಗಡಿಭಾಗದಲ್ಲಿನ ಗ್ರಾಮದ ಕೆಲವರು ತಮ್ಮ ಹೊಲ ಜಮೀನುಗಳಲ್ಲೇ ತಾತ್ಕಾಲಿಕ ಶೆಡ್, ಗುಡಿಸಲು, ನಿರ್ಮಾಣ ಮಾಡಿ ಮದ್ಯ ಮಾರಾಟಕ್ಕಿಳಿದಿದ್ದಾರೆ. ಅದರಲ್ಲೂ ಬೆಂಗಳೂರಿನಿಂದ ಕೆಲಸ ಇಲ್ಲದೆ ವಾಪಸ್ಸು ಬಂದ ಯುವಕರು ಬೈಕ್‍ನಲ್ಲಿ ಮದ್ಯ ಇಟ್ಟುಕೊಂಡು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಅಪ್ರಾಪ್ತ ವಯಸ್ಕಿನ ಮಕ್ಕಳು ಮದ್ಯ ಮಾರಾಟ ಮಾಡುತ್ತಿದ್ದಾರೆ. ಮನೆಯಲ್ಲಿ ಆಡುಗೆ ಕಾಯಕ, ತೋಟದಲ್ಲಿ ಕೆಲಸ ಮಾಡೋ ಮಹಿಳೆಯರು ಕೂಡ ಮದ್ಯ ಮಾರಾಟಕ್ಕಿಳಿದ್ದಾರೆ.
ಗೌರಿಬಿದನೂರಿನ ಹುಣೇಸನಹಳ್ಳಿಗೂ ಸಹ ಮದ್ಯಕ್ಕಾಗಿ ಆಂಧ್ರದವರು ಆಗಮಿಸುತ್ತಿದ್ದ ಕಾರಣ ಗ್ರಾಮದ ಹಲವರು ಇದನ್ನು ವಿರೋಧಿಸಿದ್ದರು. ಇದಾದ ಬಳಿಕ ಈಗ ಬಾಗೇಪಲ್ಲಿ ತಾಲೂಕಿನ ಆಂಧ್ರದ ಗಡಿಭಾಗದ ಮುಮ್ಮಡಿವಾರಪಲ್ಲಿ, ನೇಸೆವಾರಪಲ್ಲಿ, ಕೋತ್ತಕೋಟೆ, ಗೊರ್ತಪಲ್ಲಿ, ಡಿ ಕೊತ್ತಪಲ್ಲಿ ಸೇರಿದಂತೆ ಹಲವು ಗಡಿ ಗ್ರಾಮಗಳಲ್ಲಿ ಇದೇ ರೀತಿಯ ಅಕ್ರಮ ಮದ್ಯ ಮಾರಾಟ ಸಾಗುತ್ತಿದೆ.
ಮತ್ತೊಂದೆಡೆ ಆಂಧ್ರದಲ್ಲೂ ಕೊರೊನಾ ಪ್ರಕರಣಗಳು ಜಾಸ್ತಿಯಾಗಿದ್ದು, ರಾಜಾರೋಷವಾಗಿ ಮದ್ಯಕ್ಕಾಗಿ ಹಲವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಪರಿಣಾಮ ಕೊರೊನಾ ಸೋಂಕು ಆತಂಕವೂ ಕೆಲ ಪ್ರಜ್ಞಾವಂತ ಗ್ರಾಮಸ್ಥರದ್ದಾಗಿದೆ. ಉಳಿದಂತೆ ಕರ್ನಾಟಕದ ಮದ್ಯ ಅಕ್ರಮಮವಾಗಿ ಆಂಧ್ರ ಸೇರುತ್ತಿದ್ದು, ಇತ್ತೀಚೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಆಂಧ್ರದ ಅಬಕಾರಿ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಮದ್ಯ ಸರಬರಾಜು ಆಗಿರೋದು ಕರ್ನಾಟಕದ ಗಡಿಭಾಗದ ಬಾಗೇಪಲ್ಲಿಯ ಬಾರ್ ಗಳಿಂದಲೇ ಆಗಿದ್ದು, ಎಲ್ಲ ಬಾರ್, ವೈನ್ ಶಾಪ್ ಗಳು ರಾಜಕಾರಣಿಗಳದ್ದೇ ಎಂಬ ಮಾಹಿತಿ ಲಭಿಸಿದೆ.
ದೊಡ್ಡ ದೊಡ್ಡ ರಾಜಕಾರಣಿಗಳು, ಜನಪ್ರತಿನಿಧಿಗಳೇ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಆಂಧ್ರ ಸರ್ಕಾರ ನಿರ್ಣಯದಿಂದ ಮದ್ಯ ದರವನ್ನು ಮೂರು ಪಟ್ಟು ಜಾಸ್ತಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಶಿಕ್ಷಣ ಪಡೆಯಬೇಕಿದ್ದ ವಿದ್ಯಾರ್ಥಿಗಳು ಸಹ ಮದ್ಯ ಮಾರಾಟಕ್ಕಿಳಿತಿರೋದು ದುರಂತ ಸಂಗತಿಯಾಗಿದ್ದು, ಜಿಲ್ಲೆಯ ಅಬಕಾರಿ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳ ಬೇಕಿದೆ.