ಹುಬ್ಬಳ್ಳಿ: ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಇಳಿಮುಖವಾಗುತ್ತಿರುವುದರಿಂದ ಜಿಲ್ಲೆಯಲ್ಲಿನ 84 ಕೋವಿಡ್ ಕೇರ್ ಸೆಂಟರ್ ಪೈಕಿ 64 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿತ್ತು. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಎಷ್ಟೋ ಜನರು ಅಸುನೀಗಿದ್ದರು. ಜೊತೆಗೆ ಹೋಮ್ ಐಸೋಲೇಷನ್‍ನಲ್ಲಿ ಇರುವವರಿಂದ ಸೋಂಕು ಹೆಚ್ಚಾಗಿ ಹರಡಿತ್ತು. ಇದನ್ನು ಮನಗಂಡು ಜಿಲ್ಲಾಡಳಿತ ಸೋಂಕಿತರನ್ನು ಹೋಮ್ ಐಸೋಲೇಶನ್ ಮಾಡದೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ತೆರೆಯಲಾಗಿತ್ತು.
ಗ್ರಾಮೀಣ 10, ಹುಬ್ಬಳ್ಳಿ ಗ್ರಾಮೀಣ 14, ಕಲಘಟಗಿ 12, ಅಣ್ಣಿಗೇರಿ 8, ಕುಂದಗೋಳ 16, ನವಲಗುಂದ 8, ಅಳ್ನಾವರ 5 ಹೀಗೆ ಒಟ್ಟು 84 ಕೇಂದ್ರಗಳನ್ನು ತೆರೆಯಲಾಗಿತ್ತು. ಹೋಮ್ ಐಸೋಲೇಷನ್‍ನಲ್ಲಿದ್ದ ಕೆಲವರನ್ನು ಈ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಜೊತೆಗೆ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿರಲು ಅವಕಾಶ ಇಲ್ಲದ ಸೌಮ್ಯ ಲಕ್ಷಣಗಳಿರುವ ಸೋಂಕಿತರನ್ನು ಸಹ ದಾಖಲಿಸಲಾಗಿತ್ತು. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2,011 ಸೋಂಕಿತರು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
2,011 ಸೋಂಕಿತರ ಪೈಕಿ ಈ ವರೆಗೆ 1,940 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದವರು ಬರೀ 71 ಜನ ಮಾತ್ರ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅತಿ ಹೆಚ್ಚು ಎಂದರೆ 39 ಸೋಂಕಿತರಿದ್ದರೆ, 14 ಜನ ಧಾರವಾಡ ಗ್ರಾಮೀಣ ಭಾಗದಲ್ಲಿದ್ದಾರೆ. ಅಣ್ಣಿಗೇರಿ 8, ಕುಂದಗೋಳ 7, ನವಲಗುಂದದಲ್ಲಿ 3 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 20 ಕೋವಿಡ್ ಕೇರ್ ಸೆಂಟರ್ ಬಿಟ್ಟು ಉಳಿದ 64ನ್ನು ಮುಚ್ಚಲಾಗಿದೆ. ಒಂದು ವೇಳೆ ಕೋವಿಡ್ ಕೇರ್ ಸೆಂಟರ್ ಮತ್ತೆ ಬೇಕೆನಿಸಿದರೆ ಪ್ರಾರಂಭಿಸಲಾಗುವುದು. ಆದರೆ ಸದ್ಯ ಇವುಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.