ಕೊರೊನಾ ಇರುವುದರಿಂದ ಮನೆಯಲ್ಲೇ ಹಬ್ಬ ಮಾಡಿ – ಬಕ್ರೀದ್‍ಗೆ ಶುಭ ಕೋರಿದ ಸಿಎಂ

Public TV
2 Min Read
CM BSY 1 1

ಬೆಂಗಳೂರು: ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್‍ಗೆ ಮುಖ್ಯ ಮಂತ್ರಿ ಯಡಿಯೂರಪ್ಪನವರು ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಎಸ್‍ವೈ, ಸಮಸ್ತ ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ ಬಲಿದಾನಗಳ ಸಂಕೇತವಾಗಿರುವ ಈದ್ ಹಬ್ಬವು ಸುಖ ಸಂತೋಷಗಳನ್ನು ಹೊತ್ತು ತರಲಿ ಎಂದು ಪ್ರಾರ್ಥಿಸುತ್ತೇನೆ. ಕೋವಿಡ್ ಸಂದರ್ಭ ಇರುವುದರಿಂದ ಎಲ್ಲರೂ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಿ. ಎಲ್ಲ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದು ಕೋರುತ್ತೇನೆ ಎಂದಿದ್ದಾರೆ.

ಜೊತೆಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಅವರೂ ಕೂಡ ಟ್ವೀಟ್ ಮಾಡಿದ್ದು, ಮುಸ್ಲಿಂ ಬಾಂಧವರಿಗೆ ಪ್ರೀತಿ, ಭ್ರಾತೃತ್ವ ಹಾಗೂ ಮಾನವೀಯ ಸೇವೆಯ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು. ಈ ಹಬ್ಬ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಹೆಚ್ಚಿಸಲಿ ಎಂದು ಹಾರೈಸುತ್ತೇನೆ. ವಿಪತ್ತಿನ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬಕ್ರೀದ್ ಹಬ್ಬವನ್ನು ಆಚರಿಸಬೇಕೆಂದು ವಿನಂತಿಸುತ್ತೇನೆ ಎಂದು ಶುಭ ಕೋರಿದ್ದಾರೆ.

ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬದ ಆಶಯಗಳು ನಮ್ಮೆಲ್ಲರ ಬದುಕಿನ ಮೌಲ್ಯಗಳಾಗಲಿ. ಸುಖ-ಕಷ್ಟಗಳೆರಡರ ಕಾಲದಲ್ಲಿಯೂ ಸೌಹಾರ್ದತೆಯ ಬಂಧ ನಮ್ಮೆಲ್ಲರನ್ನು ಬೆಸೆದಿರಲಿ. ನನ್ನ ಎಲ್ಲ ಮುಸ್ಲಿಮ್ ಬಂಧುಗಳಿಗೆ ಈದ್ ಮುಬಾರಕ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವು ಸೌಹಾರ್ದತೆ ಮೂಡಿಸಲಿ. ನಾಡಿನ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಶುಭಾಶಯಗಳು. ಕೊರೊನಾ ಸವಾಲಿನ ನಡುವೆ ಬದುಕುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರೂ ಕೂಡ ಜವಾಬ್ದಾರಿಯಿಂದ ವರ್ತಿಸೋಣ. ಬಕ್ರೀದ್ ಹಬ್ಬ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.

ಮುಸಲ್ಮಾನ್ ಬಾಂಧವರಿಗೆ ತ್ಯಾಗ ಮತ್ತು ಬಲಿದಾನಗಳ ಪ್ರತೀಕವಾಗಿರುವ ಬಕ್ರಿದ್ ಹಬ್ಬದ ಶುಭಾಶಯಗಳು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಟ್ವೀಟ್ ಮಾಡಿ, ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸಮಸ್ತ ಮುಸಲ್ಮಾನ ಬಾಂದವರಿಗೆ ಶುಭಾಶಯಗಳನ್ನು ಕೋರುತ್ತೇನೆ. ವಿಶ್ವ ಭಾತೃತ್ವವನ್ನು ಸಾರುವ ಪವಿತ್ರ ಹಬ್ಬವಾದ ಬಕ್ರೀದ್ ನಾಡಿನಲ್ಲಿ ಸ್ನೇಹ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಪ್ರಜ್ವಲಿಸಲು ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *