ಉಡುಪಿ: ಕೊರೊನಾ ಆರ್ಥಿಕ ಸಂಕಷ್ಟಕ್ಕೆ ಉಡುಪಿ ಜಿಲ್ಲೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕನ್ನರಪಾಡಿ ನಿವಾಸಿ ಟೈಲರ್ ವೃತ್ತಿ ಮಾಡುತ್ತಿದ್ದ ರಘುನಾಥ್ ಸೇರಿಗಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಎರಡು ಮೂರು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದ ಅವರು, ಆರ್ಥಿಕವಾಗಿ ಸಾಕಷ್ಟು ಜರ್ಜರಿತರಾಗಿದ್ದರು. ಎರಡು ದಿನದಿಂದ ಮನೆಯಿಂದ ಏಕಾಏಕಿ ಕಾಣೆಯಾಗಿದ್ದರು. ಇಂದು ಮನೆ ಸಮೀಪದ ಬಾವಿಯಲ್ಲಿ ರಘುನಾಥ್ ಮೃತದೇಹ ಪತ್ತೆಯಾಗಿದೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಆಗಲಿರುವ ಅವರು, ಹಣ ಇಲ್ಲದೆ ಖಿನ್ನತೆಗೆ ಜಾರಿದ್ದರು. ಶವ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಭಾಗ್ಯರಾಜ್ ಎಂಬ ಯುವಕ ಮಲ್ಪೆಯಲ್ಲಿ ನೇಣಿಗೆ ಶರಣಾಗಿದ್ದರು. ಲೋಕೇಶ್ ಎಂಬ ಯುವಕ ಉದ್ಯೋಗ ಸಿಕ್ಕಿಲ್ಲ ಎಂದು ಕಳೆದ ರಾತ್ರಿ ಉಡುಪಿಯ ಕೊಡಂಕೂರು ಎಂಬಲ್ಲಿ ನೇಣಿಗೆ ಶರಣಾಗಿದ್ದರು.