ಮುಂಬೈ: ಕೊರೊನಾ ವೈರಸ್ ಸಾವಿನ ಸಂಖ್ಯೆ ಹಾಗೂ ಪಾಸಿಟಿವ್ ಪ್ರಕರಣಗಳಲ್ಲಿ ಮಹಾರಾಷ್ಟ್ರದ ರಾಜಧಾನಿ ಮುಂಬೈ ಕೊರೊನಾ ವೈರಸ್ ತವರು ಮನೆ ಚೀನಾವನ್ನೇ ಹಿಂದಿಕ್ಕಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಸ್ತುತ 85,724 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಸೋಂಕಿನಿಂದ 4,938 ಸಾವುಗಳು ಸಂಭವಿಸಿವೆ. ಹಾಗೇಯೆ ಚೀನಾದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 4,634 ಸಾವನ್ನಪ್ಪಿದರೆ, ಪ್ರಸ್ತುತ ಚೀನಾದಲ್ಲಿ 83,565 ಕೊರೊನಾ ಪಾಸಿಟಿವ್ ಪ್ರಕರಣಗಳು ಇವೆ. ಈ ಮೂಲಕ ಮುಂಬೈ ಚೀನಾವನ್ನೇ ಮೀರಿಸಿದೆ.
ಸದ್ಯ ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಚೀನಾದಲ್ಲಿ ಒಂದು ದಿನಕ್ಕೆ ಕೇವಲ ಒಂದಂಕಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಚೀನಾ ಸೋಂಕಿನಿಂದ ಬೇಗ ಗುಣಮುಖವಾಗುತ್ತಿದೆ. ಆದರೆ ಭಾರದಲ್ಲಿ ಸೋಂಕು ದಿನೇ ದಿನೇ ತನ್ನ ವ್ಯಾಪ್ತಿಯನ್ನು ವೃದ್ದಿಸಿಕೊಳ್ಳುತ್ತಿದ್ದು, ಮುಂಬೈನಲ್ಲಿ ಜುಲೈ 1ರಿಂದ ದಿನಾ ಸರಾಸರಿ 1,100 ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಸದ್ಯ ಭಾರತದಲ್ಲಿ ಮಹಾರಾಷ್ಟ್ರ ಕೊರೊನಾ ಹಬ್ ಆಗಿ ಪರಿವರ್ತನೆಗೊಂಡಿದೆ. ದೇಶದಲ್ಲಿ ಇಲ್ಲೇ ಅತೀ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ 2,11,987 ಪ್ರಕರಣಗಳೊಂದಿಗೆ, ಮಹಾರಾಷ್ಟ್ರ ಸೋಮವಾರ ಟರ್ಕಿ ದೇಶವನ್ನು ಮೀರಿಸಿದೆ. ಟರ್ಕಿಯಲ್ಲಿ 2,05,758 ಕೊರೊನಾ ಪ್ರಕರಣಗಳು ದಾಖಲಾಗಿದೆ. ಜೂನ್ 4ರಂದು ಮಹಾರಾಷ್ಟ್ರವು ಜರ್ಮನಿ (198,064) ಮತ್ತು ದಕ್ಷಿಣ ಆಫ್ರಿಕಾ (205,721)ವನ್ನು ಕೊರೊನಾ ಅಂಕಿ ಅಂಶದಲ್ಲಿ ಹಿಂದಿಕ್ಕಿತ್ತು.
ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 211,987 ಆಗಿದ್ದರೆ, ಸಾವಿನ ಸಂಖ್ಯೆ 9,026 ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಶೇ.67ರಷ್ಟು ಜನ ಗುಣಮುಖರಾಗಿದ್ದಾರೆ. ಸದ್ಯ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮುಂಬೈನಲ್ಲಿ 3,520 ಹೊಸ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮಹಾಲಕ್ಷ್ಮಿ ಕುದುರೆ ಸವಾರಿ ಸ್ಥಳ, ದಹಿಸರ್, ಮುಲುಂಡ್ ಮತ್ತು ಬಾಂದ್ರಾ ಕುರ್ಲ ಕಾಂಪ್ಲೆಕ್ಸ್ ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡಲು ಮಹಾರಾಷ್ಟ್ರದ ಸರ್ಕಾರ ಮುಂದಾಗಿದೆ.