– ಚೇತರಿಕೆಯಾದ ನಂತರವೂ ಮನೆಯಲ್ಲಿ ಆಮ್ಲಜನಕದ ಅಗತ್ಯವಿದೆ
– ಮುಂದೆ ಇಡೀ ದೇಹಕ್ಕೆ ಸಮಸ್ಯೆ ತರಬಹುದು
ನವದೆಹಲಿ: ಕೋವಿಡ್ 19 ನಿಂದ ಕೇವಲ ಶ್ವಾಸಕೋಶಕ್ಕೆ ಮಾತ್ರ ಹಾನಿ ಅಲ್ಲ. ಮೆದುಳು ಮತ್ತು ಮೂತ್ರ ಪಿಂಡಗಳಿಗೂ ಹಾನಿಯಾಗುತ್ತದೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ, ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತೀವ್ರತರವಾದ ಅನಾರೋಗ್ಯದಿಂದ ಬಳಲಿ ಚೇತರಿಸಿಕೊಂಡ ಕೆಲ ತಿಂಗಳ ನಂತರವೂ ರೋಗಿಗಳ ಶ್ವಾಸಕೋಶವೂ ಕೆಟ್ಟ ಆಕಾರದಲ್ಲಿರುವುದು ದೃಢಪಟ್ಟಿದೆ. ಹೀಗಾಗಿ ಅವರಿಗೆ ಮನೆಯಲ್ಲೇ ಆಮ್ಲಜನಕ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಸೋಂಕು ಶ್ವಾಸಕೋಶದಿಂದ ಪ್ರಾರಂಭವಾಗುವ ಕಾರಣ ಇದನ್ನು ಶ್ವಾಸಕೋಶದ ಕಾಯಿಲೆ ಎಂದು ಕರೆಯಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಸೋಂಕು ಇಡೀ ದೇಹಕ್ಕೆ ಸಮಸ್ಯೆ ತರಬಹುದು. ಇದರಿಂದ ಶ್ವಾಸಕೋಶಕ್ಕೆ ಮಾತ್ರ ಹಾನಿ ಅಲ್ಲ. ಮೆದುಳು ಮತ್ತು ಮೂತ್ರ ಪಿಂಡಗಳಿಗೂ ಹಾನಿಯಾಗುತ್ತದೆ. ಇಡೀ ದೇಹಕ್ಕೆ ಸಮಸ್ಯೆ ತರುವ ಕಾರಣ ಇದನ್ನು ʼವ್ಯವಸ್ಥಿತ ಕಾಯಿಲೆʼ ಎಂಬುದಾಗಿ ಕರೆಯಬಹುದು ಎಂದು ಅಭಿಪ್ರಾಯಪಟ್ಟರು.
Advertisement
ಕೋವಿಡ್ -19 ರೋಗಿಗಳು ಈಗ ಪಾರ್ಶ್ವವಾಯು ಮತ್ತು ನರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗ ಇದು ಉಸಿರಾಟ ಸೋಂಕುಗಿಂತಲೂ ಈ ಸಮಸ್ಯೆ ಮತ್ತಷ್ಟು ಹದಗೆಡಿಸಿದೆ ಎಂಬ ಆತಂಕಕಾರಿ ವಿಚಾರವನ್ನು ಹೊರ ಹಾಕಿದರು.
Advertisement
ಮೊದಲು ಇದು ಕೇವಲ ನ್ಯುಮೋನಿಯಾ ಎಂದೇ ನಾವು ಭಾವಿಸಿದ್ದೇವು. ಬಳಿಕ ಅಧ್ಯಯನವಾಗುತ್ತಿದ್ದಂತೆ ಹೈಪರ್ಕೋಗುಲೇಬಲ್ ಸ್ಥಿತಿಗೆ ಹೋದಾಗ ಶ್ವಾಸಕೋಶ ಮತ್ತು ಹೃದಯದಲ್ಲಿನ ರಕ್ತನಾಳಗಳನ್ನು ಹೆಪ್ಪುಗಟ್ಟುವಿಕೆಯಿಂದ ರೋಗಿಗಳು ಹಠಾತ್ತನೆ ಸಾಯುತ್ತಿರುವುದು ತಿಳಿಯಿತು. ಆದರೆ ಈಗ ಈ ಬೆಳವಣಿಗೆ ಮೆದುಳಿನಲ್ಲಿ ನಡೆಯುತ್ತಿರುವುದನ್ನು ತಿಳಿಯುತ್ತಿದ್ದೇವೆ. ಪಾರ್ಶ್ವವಾಯು ಮತ್ತು ನರ ಸಮಸ್ಯೆಯಿಂದ ಬಳಲುವ ರೋಗಿಗಳಲ್ಲಿ ಇದು ಹೆಚ್ಚಾಗಿ ಕಾಣಿಸುತ್ತಿದೆ. ಆರಂಭದಲ್ಲಿ ಇದು ದೊಡ್ಡ ಸಮಸ್ಯೆಯಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಈಗ ನಾವು ಈ ರೀತಿಯ ಹೆಚ್ಚಿನ ಪ್ರಕರಣಗಳನ್ನು ನೋಡುತ್ತಿದ್ದು, ದೊಡ್ಡ ಸಮಸ್ಯೆಯಾಗಿದೆ ಎಂದು ಗುಲೇರಿಯಾ ತಿಳಿಸಿದರು.
ತೀವ್ರವಾದ ನ್ಯುಮೋನಿಯಾ ಹೊಂದಿರುವ ಹಲವಾರು ರೋಗಿಗಳನ್ನು ನಾವು ನೋಡಿದ್ದೇವೆ. ಆರಂಭದಲ್ಲಿ ಸೋಂಕಿನಿಂದಾಗಿ ಶ್ವಾಸಕೋಶಕ್ಕೆ ಗಂಭೀರವಾದ ಗಾಯವಾಗುತ್ತದೆ. ರೋಗಿಗಳು ಗುಣಮುಖರಾದ ಮೂರು ತಿಂಗಳ ಬಳಿಕ ಸಿಟಿ ಸ್ಕ್ಯಾನ್ ಮಾಡಿದಾಗ ಅವರ ಶ್ವಾಸಕೋಶ ಕೆಟ್ಟ ಆಕಾರದಲ್ಲಿರುವುದು ಗೊತ್ತಾಗಿದೆ. ಹೀಗಾಗಿ ರೋಗಿಗಳು ಚೇತರಿಕೆಯಾದ ಬಳಿಕವೂ ಕೆಲವರಿಗೆ ಮನೆಯಲ್ಲಿ ಆಮ್ಲಜನಕದ ಅಗತ್ಯವಿದೆ. ಡಿಸ್ಚಾರ್ಜ್ ಆದ ರೋಗಿಗಳು ವಾರದ ಒಳಗಡೆ ಈ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ. ಗುಣಮುಖರಾದರೂ ಕೆಲಸಕ್ಕೆ ಹೋಗಲು ಶಕ್ತಿ ಇಲ್ಲ ಎಂದಿದ್ದಾರೆ. ಕೆಲ ಸಂದರ್ಭಗಳಲ್ಲಿ, ಗಂಭೀರವಾದ ನರವೈಜ್ಞಾನಿಕ ಸಮಸ್ಯೆಗಳಿವೆ ಎಂದು ಹೇಳಿದರು.
ವೈರಸ್‌ಗೆ ಪ್ರತಿಕ್ರಿಯೆಯಾಗಿ ದೇಹವು ಅಭಿವೃದ್ಧಿಪಡಿಸಿದ ಪ್ರತಿಕಾಯಗಳು ಶಾಶ್ವತ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆಯೇ ಎಂಬುದರ ಬಗ್ಗೆ ವಿಶ್ವಾದ್ಯಂತ ಸಂಶೋಧಕರು ಅಧ್ಯಯನ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಭಾರತದಲ್ಲೂ ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ದೇಹದ ರೋಗನಿರೋಧಕ ಪ್ರತಿಕ್ರಿಯೆಯ ಬಗ್ಗೆ ಕಲಿಯುತ್ತಿದ್ದೇವೆ. ಆದರೆ ಎಷ್ಟು ದಿನದವರೆಗೆ ದೇಹಕ್ಕೆ ಇದು ರಕ್ಷಣೆ ನೀಡುತ್ತದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.