ಕಾರವಾರ: ಲಾಕ್ ಡೌನ್ ಇರಲಿ, ಕಫ್ರ್ಯೂ ಇರಲಿ, ಏನೇ ಆದರೂ ಪೊಲೀಸ್ ಸಿಬ್ಬಂದಿ ಇರದಿದ್ರೆ ಏನಾಗುತ್ತೆ ಎಂದು ಊಹಿಸೋದೂ ಕಷ್ಟ. ಹೀಗಿರುವಾಗ ತಮ್ಮ ಜೀವದ ಪ್ರಾಮುಖ್ಯತೆಯನ್ನು ಬದಿಗೊತ್ತಿ, ಸಾರ್ವಜನಿಕರ ಸೇವೆಯಲ್ಲಿ ನಿರತರಾಗುವ ಇವರನ್ನು ಸಹ ಕರೊನಾ ಮಹಾಮಾರಿ ಬಿಟ್ಟಿಲ್ಲ. ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ಪ್ರಜ್ಞೆ ಮೆರೆಯುವ ಇವರಲ್ಲಿ ಹಲವರು, ಕೊರೊನಾ ಮಹಾಮಾರಿಗೆ ಜೀವ ಕಳೆದುಕೊಂಡಿದ್ದಾರೆ. ಹಲವರು ಸಾವಿನ ಕದ ತಟ್ಟಿ ಬಂದಿದ್ದಾರೆ. ಹೀಗಿರುವಾಗ ಜನರ ರಕ್ಷಣೆಯ ಹೊಣೆಯ ಜೊತೆ ಅವರ ಆರೋಗ್ಯವೂ ಮುಖ್ಯವಾಗುತ್ತೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ರಕ್ಷಣಾ ಇಲಾಖೆ ಪೊಲೀಸರ ಆರೋಗ್ಯ ಕಾಪಾಡುವ ಕೆಲಸಕ್ಕೆ ಮುಂದಾಗಿದ್ದು “ಉಗಿ” ಸೇವಿಸುವ ವ್ಯವಸ್ಥೆಗೆ (ನೆಬ್ಯುಲೈಸೇಷನ್) ಮುಂದಾಗಿದೆ.
ಪಂಚಕರ್ಮ ಪದ್ದತಿಯಲ್ಲಿ ದೇಹದ ನೋವುಗಳು, ಕಫ, ರೋಗಾಣುವಿನ ಅಂಶಗಳನ್ನು ಹೋಗಲಾಡಿಸಲು ಸ್ಟೀಮಿಂಗ್ ಜೊತೆಗೆ ಕೆಲವು ಔಷಧೀಯ ಗಿಡಮೂಲಿಕೆಯನ್ನು ಹಾಕಿ ಹವೆಯನ್ನು ನೀಡಲಾಗುತ್ತದೆ. ಈ ಹವೆಯಿಂದ ಮುನುಷ್ಯನ ದೇಹದಲ್ಲಿ ಹಲವು ಬದಲಾವಣೆಯನ್ನು ಕಾಣಬಹುದಾಗಿದೆ. ಈ ಪದ್ಧತಿ ಕೊರೊನಾ ಮಹಾಮಾರಿಯ ತೀವ್ರತೆ ತಡೆಯುವ ಜೊತೆಗೆ ಉಸಿರಾಟದ ಸಮಸ್ಯೆ, ಶೀತ, ಕಫವನ್ನು ಹೋಗಲಾಡಿಸಲು ರಾಮ ಬಾಣದಂತೆ ಕಾರ್ಯನಿರ್ವಹಿಸುತ್ತದೆ.
ಆಯುರ್ವೇದ ಶಾಸ್ತ್ರದಲ್ಲಿ “ನಾಡಿ ಸ್ವೇದನ” ಎಂದು ಕರೆಯುತ್ತಾರೆ. ಕ್ರಿಯಾ ಪದ್ಧತಿಯಲ್ಲಿ ಆಯುರ್ವೇದದ ಹತ್ತು ಗಿಡಮೂಲಿಕೆಯನ್ನು ಬಳಸಲಾಗುತ್ತದೆ. ಮೂಗಿನಲ್ಲಿ ಕಫ ಕಟ್ಟಿದ್ದರೆ ಅದನ್ನು ವಿಲಯನ ಮಾಡಿಸುತ್ತದೆ. ಉಸಿರಾಟಕ್ಕೆ ತೊಂದರೆಯಾಗುವ ತಡೆಯನ್ನು ನಿವಾರಣೆ ಮಾಡುತ್ತದೆ. ಸ್ಟೀಮ್ ನೀಡುವುದರಿಂದ ಅಂಟಂಟಾಗಿರುವ ಕಫವು ನೀರಾಗಿ ಪರಿವರ್ತನೆಯಾಗಿ ಕರಗಿ ಹೋಗುತ್ತದೆ. ಆಯುರ್ವೇದ ವೈದ್ಯರು ಹೇಳುವಂತೆ ಸ್ಟೀಮಿಂಗ್ ನೀಡುವುದರಿಂದ ಉಸಿರಾಟಕ್ಕೆ ಚೇತರಿಕೆ ನೀಡುತ್ತದೆ. ಇದಕ್ಕೆ ಉಪಯೋಗಿಸುವ ಔಷಧೀಯ ಗಿಡಮೂಲಿಕೆಯೂ ಅತೀ ಮುಖ್ಯವಾಗಿದ್ದು, ಬಜೆ, ಹಿಪ್ಪಲಿ, ಅರಿಶಿನ, ಶುಂಠಿ, ಹರಿದ್ರಾ, ದಶಮೂಲ, ಆಡುಸೋಗೆ ಸೊಪ್ಪು ಗಳನ್ನು ಬಳಸಲಾಗುತ್ತದೆ. ಸದ್ಯ ಈ ಪ್ರಯೋಗ ರಾಜ್ಯದಲ್ಲೇ ಮೊದಲಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವಿರುದ್ಧ ಹಗಲಿರುಳೆನ್ನದೇ ಹೋರಾಡುವ ಪೊಲೀಸರ ಆರೋಗ್ಯ ರಕ್ಷಣೆಗೆ ಬಳಸಲಾಗುತಿದ್ದು, ಪ್ರತಿ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಉಗಿ ಸೇವೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮೊದಲಬಾರಿಗೆ ಜಿಲ್ಲೆಯ ಅಂಕೋಲ ಠಾಣೆಯಲ್ಲಿ ಪ್ರಾರಂಭ ಮಾಡಿದ್ದು, ಪ್ರತಿ ದಿನ ಕರ್ತವ್ಯಕ್ಕೆ ಹಾಜರಾಗುವ ಹಾಗೂ ಮರಳುವಾಗ ಸಿಬ್ಬಂದಿಗಳು ಠಾಣೆಯಲ್ಲಿ ಆಯುರ್ವೇದ ಪದಾರ್ಥಗಳನ್ನು ನೀರಿನಲ್ಲಿ ಹಾಕಿ ಹವೆ ತುಂಬಿದ ಪೈಪ್ ಮುಂದೆ ಕುಳಿತು ಬಿಸಿ ಹವೆಯನ್ನು ತೆಗೆದುಕೊಳ್ಳುತ್ತಾರೆ. ಸುಮಾರು ಐದು ಸಾವಿರ ರೂಪಾಯಿ ಅಂದಾಜಿನಲ್ಲಿ ಈ ಠಾಣೆಯಲ್ಲಿ “ಉಗಿ” ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಶಿವಪ್ರಕಾಶ್ ನೇತೃತ್ವದಲ್ಲಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಇದರಿಂದಾಗಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಕಫ, ಉಸಿರಾಟದ ತೊಂದರೆಗಳಾದರೆ ಈ ಹವೆಯನ್ನು ತೆಗೆದುಕೊಂಡಲ್ಲಿ ಒಂದಿಷ್ಟು ಚೇತರಿಕೆ ಲಭಿಸಲಿದೆ. ಇನ್ನು ಪ್ರತಿ ದಿನ ಈ ಹವೆಯನ್ನು ತೆಗೆದುಕೊಂಡರೆ ಆರೋಗ್ಯದಿಂದಿರಲು ಸಾಧ್ಯವಿದ್ದು, ಇದೀಗ ಜಿಲ್ಲೆಯ ಎಲ್ಲಾ ಠಾಣೆಯಲ್ಲಿ ಈ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ.