– ಬಂಟ್ವಾಳದಲ್ಲೊಂದು ಹೃದಯವಿದ್ರಾವಕ ಘಟನೆ
ಮಂಗಳೂರು: ಕೊರೊನಾದಿಂದಾಗಿ ಮೃತಪಟ್ಟ ತಂದೆಯ ಅಂತ್ಯಕ್ರಿಯೆಯನ್ನು ನೋಡಿದ ಮಗ ಹೃದಯಘಾತವಾಗಿ ಮೃತಪಟ್ಟ ಘಟನೆ ಮಂಗಳೂರಿನ ಸಮೀಪದ ಬಂಟ್ವಾಳದಲ್ಲಿ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಣಚ ಗ್ರಾಮದ ಬೈಲಗುತ್ತು ನಿವಾಸಿ 85 ವರ್ಷದ ಭುಜಂಗ ಶೆಟ್ಟಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಬಳಿಕ ಇಂದು ಅವರ ಅಂತ್ಯ ಸಂಸ್ಕಾರ ನಡೆಸುತ್ತಿದ್ದ ವೇಳೆ ಅವರ ಮಗ ಶೈಲೇಶ್ ಶೆಟ್ಟಿ(44) ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:‘ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ’ದಿಂದ ಉಚಿತ ಆಕ್ಸಿಜನ್ ಅಂಬುಲೆನ್ಸ್ ಲೋಕಾರ್ಪಣೆ
ಶೈಲೇಶ್ ಶೆಟ್ಟಿ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದು ಎರಡು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಮೃತಪಟ್ಟ ಭುಜಂಗ ಶೆಟ್ಟಿಯವರ ಮನೆಯಲ್ಲಿ ಅವರ ಪತ್ನಿಯನ್ನು ಹೊರತುಪಡಿಸಿ ಮನೆಯಲ್ಲಿದ್ದ ಎಲ್ಲರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ಆದರೆ ಶೈಲೇಶ್ ಶೆಟ್ಟಿ ಬೇರೆ ಮನೆಯಲ್ಲಿ ವಾಸವಿದ್ದರಿಂದಾಗಿ ಅವರಿಗೆ ಕೊರೊನಾ ಸೋಂಕು ಬಾಧಿಸಿರಲಿಲ್ಲ. ಆದರೆ ತಂದೆಯ ಅಂತ್ಯಕ್ರಿಯೆ ನೋಡಿ ಇದೀಗ ಅವರು ಹೃದಯಾಘಾತವಾಗಿ ಸಾವನ್ನಪ್ಪಿದ್ದು ಕುಟುಂಬಸ್ಥರಿಗೆ ಆಘಾತವಾಗಿದೆ.