ಹಾವೇರಿ: ಕೊರೊನಾ ಪಾಸಿಟಿವ್ ನಿಂದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ಮಾಡಲು ಸಂಬಂಧಿಕರು ಹಾಗೂ ಗ್ರಾಮಸ್ಥರು ಭಯದಿಂದ ಒಪ್ಪದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.
ಅಂಬ್ಯುಲೆನ್ಸ್‌ನಲ್ಲೇ ಮಹಿಳೆಯ ಮೃತ ದೇಹವನ್ನ ಇಟ್ಟು ಸಿಬ್ಬಂದಿಗಳು ಕಾಯುತ್ತಿದ್ದಾರೆ. ಕಳೆದ 2ಗಂಟೆಗಳಿಂದ ಅಂಬ್ಯುಲೆನ್ಸ್‍ನಲ್ಲೇ ಮಹಿಳೆಯ ಮೃತದೇಹ ಇಟ್ಟು ಡ್ರೈವರ್ ವಾಹನದಲ್ಲಿದ್ದಾರೆ. ಕೊರೊನಾ ಭಯ ಇರೋದ್ರಿಂದ ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾರು ಬಂದಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಕೊರೊನಾ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡಬೇಕು. ಆದರೆ ಯಾರು ಬಾರದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಜ್ವರದ ಸಮಸ್ಯೆಯಿಂದ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಮಹಿಳೆ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವ್ ಆಗಿ ಮೃತಪಟ್ಟಿದ್ದರಿಂದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.