ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ರು. ಸಭೆ ನಂತರ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಮೃತಪಟ್ಟು ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲ ಕುಟುಂಬಗಳು ಬೀದಿಪಾಲಾಗಿವೆ. ಇದನ್ನು ಮನಗಂಡು ಬಿಪಿಎಲ್ ಕುಟುಂಬದಲ್ಲಿ ಕೊರೊನಾದಿಂದ ವಯಸ್ಕರು ಅಥವಾ ದುಡಿಯುವ ವ್ಯಕ್ತಿ ಮೃತಪಟ್ಟರೆ ಅಂತಹ ಕುಟುಂಬಕ್ಕೆ ಕುಟುಂಬಕ್ಕೆ ಒಬ್ಬರಿಗೆ ಸೀಮಿತವಾಗಿ ಒಂದು ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. 250-300 ಕೋಟಿ ಇದಕ್ಕಾಗಿ ವಿನಿಯೋಗಿಸಲಾಗುತ್ತದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಇರುವುದರಲ್ಲಿಯೇ ಉತ್ತಮವಾಗಿದೆ. ಅದಕ್ಕಾಗಿಯೇ ದೇಶದಲ್ಲೇ ನಾವು ವಯಸ್ಕರ ಮೃತರಾದಲ್ಲಿ ಅವರ ಕುಟುಂಬಕ್ಕೆ ಪರಿಹಾರ ನೀಡುವ ಯೋಜನೆ ತಂದಿದ್ದೇವೆ ಎನ್ನುವ ಮೂಲಕ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದರು.
ಜೂನ್ 7ರ ಬಿಗ್ ಬುಲೆಟಿನ್‍ನಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್‍ಆರ್ ರಂಗನಾಥ್ ಅವರು, ಕೊರೊನಾದಿಂದ ಮೃತರಾದ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕು. ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದೇ ಇದ್ದರೂ ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಬೇಕು. ಈ ಮೂಲಕ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಸಲಹೆಯನ್ನು ಸ್ವೀಕರಿಸಿದ ಸರ್ಕಾರ ಈಗ ಬಿಪಿಎಲ್ ಕಾರ್ಡ್ ಇರುವ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 1 ಲಕ್ಷ ರೂ. ನೀಡಲು ಮುಂದಾಗಿದೆ.