-ಆಸ್ಪತ್ರೆ ಎದುರು ಅಭಿಮಾನಿಗಳ ದಂಡು
ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭಿಸಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಾರಾಯಣರಾವ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಶಾಸಕರು ಕಳೆದ ಒಂದು ತಿಂಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ.
66 ವರ್ಷದ ನಾರಾಯಣರಾವ್ ಅವರಿಗೆ ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಇದೆ. ನೆಚ್ಚಿನ ಶಾಸಕ ಆರೋಗ್ಯ ಸ್ಥಿತಿ ಮಾಹಿತಿ ಪಡೆಯಲು ಆಸ್ಪತ್ರೆ ಎದುರು ಅಭಿಮಾನಿಗಳು ಆಗಮಿಸಿದ್ದು ಕಂಡು ಬಂದಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಬುಧವಾರ, ನಾರಾಯಣರಾವ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕರವಾಗಿದೆ. ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯ ಡಾ. ಮಹೇಶ್ ಅವರೆಂದಿಗೆ ಮಾತನಾಡಿ ಅವರ ಆರೋಗ್ಯ ವಿಚಾರಿಸಿದ್ದೇನೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣರಾವ್ ಅವರ ಸ್ಥಿತಿಯನ್ನು ವಿಡಿಯೋ ಕಾಲ್ ಮೂಲಕವೇ ಗಮನಿಸಿದ್ದೇನೆ. ಅವರಿಗೆ ಭಗವಂತ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತೇನೆ ಎಂದು ಹೇಳಿದ್ದರು.
ಇತ್ತ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಸಿಯುರೆಳೆದಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹೊತ್ತಲ್ಲೇ ಸೋಂಕಿಗೆ ಕೇಂದ್ರ ಸಚಿವರೊಬ್ಬರು ಪ್ರಾಣಬಿಟ್ಟಿದ್ದು ಆತಂಕ ಹೆಚ್ಚಿಸಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಪಾರ್ಥಿವ ಶರೀರವನ್ನು ಬೆಳಗಾವಿಗೆ ಕೊಂಡೊಯುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಸಂಜೆ 4 ಗಂಟೆಗೆ ದೆಹಲಿಯ ಲೋದಿ ರಸ್ತೆಯಲ್ಲಿರುವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.