– ಮನಸ್ಸು ಬಯಸಿದ್ರೂ ಅಪ್ಪಿಕೊಳ್ಳಲು ಆಗಲ್ಲ
ಶ್ರೀನಗರ: ಕೊರೊನಾ ವೈರಸ್ ಬಂದಾಗಿನಿಂದ ಪತ್ನಿಗೆ ಕಿಸ್ ಕೊಡಲು ಆಗುತ್ತಿಲ್ಲ. ಮನಸ್ಸು ಬಯಸಿದರೂ ಅಪ್ಪಿಕೊಳ್ಳಲು ಸಹ ಆಗುತ್ತಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬುಲ್ಲಾ ಹೇಳಿದ್ದಾರೆ.
ಭಾನುವಾರ ಶ್ರೀನಗರದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ಫಾರೂಖ್ ಅಬ್ದುಲ್ಲಾ ನೆರೆದಿದ್ದ ಜನರನ್ನ ಉದ್ದೇಶಿಸಿ ಸುಮಾರು 35 ನಿಮಿಷ ಮಾತನಾಡಿದರು. ಈ ವೇಳೆ ಕೊರೊನಾದಿಂದ ಜೀವನದಲ್ಲಾದ ಅನಿರೀಕ್ಷಿತ ಬದಲಾವಣೆಗಳ ಬಗ್ಗೆ ಹೇಳುತ್ತಿದ್ದರು. ಪತ್ನಿಗೆ ಮುತ್ತು ಕೊಡಲು ಮತ್ತು ಅಪ್ಪಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿರುವ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಸ್ಕ್ ಧರಿಸದೇ ನಿಮ್ಮ ಜೊತೆಗಿರುವ ಫೋಟೋಗಳನ್ನ ಮಗಳು ನೋಡಿದ್ರೆ ಮನೆಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇಂದು ಜನರು ಹಸ್ತಲಾಘವ, ಆತ್ಮೀಯರನ್ನ ಅಪ್ಪಿಕೊಳ್ಳಲು ಭಯ ಪಡುತ್ತಿದ್ದಾರೆ. ಮಹಾಮಾರಿಯಿಂದ ವಿಶ್ವದಲ್ಲಿ ಇನ್ನು ಜನ ಸಾವನ್ನಪ್ಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯ ದೇಶದಲ್ಲಿ ನಮ್ಮದೇ ಎರಡು ಲಸಿಕೆಗಳು ಬಂದಿದ್ದು, ವಿತರಣೆ ಸಹ ಮಾಡಲಾಗುತ್ತಿದೆ. ಎರಡೂ ಲಸಿಕೆಗಳು ಯಶಸ್ವಿಯಾಗಲಿ. ನಮ್ಮ ಸಮಾಜ ಮತ್ತೆ ಮೊದಲಿನಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.