ಭೋಪಾಲ್ : ಕೋವಿಡ್-19 ನಿಂದ ಗುಣವಾಗಲು ಸೀಮೆಎಣ್ಣೆ ಸೇವಿಸಿದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಹೇಂದ್ರ ಮೃತನಾಗಿದ್ದಾನೆ. ಈತನಿಗೆ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಿತ್ತು. ಆದರೆ ತನಗೆ ಕೊರೊನಾ ಇದೆ ಎಂದು ಭಾವಿಸಿ ಸೀಮೆಎಣ್ಣೆ ಸೇವಿಸಿದರೆ ಕೊರೊನಾದಿಂದ ಗುಣವಾಗಬಹುದು ಎಂದು ನಂಬಿದ್ದನು. ಹೀಗಾಗಿ ಸೀಮೆಎಣ್ಣೆ ಸೇವಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ.
ಮಹೇಂದ್ರ ವೃತ್ತಿಯಲ್ಲಿ ದರ್ಜಿಯಾಗಿದ್ದ. ತನ್ನ ಕುಟುಂಬದೊಂದಿಗೆ ಭೋಪಾಲ್‍ನ ಶಿವನಗರ ಹಿನೋತಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಮಹೇಂದ್ರ ತನಗೆ ತಾನೇ ಕೊರೊನಾ ರೋಗವಿದೆ ಎಂದು ಭಾವಿಸಿದ್ದ. ಸೀಮೆಎಣ್ಣೆ ಕುಡಿಯುವುದರಿಂದ ವೈರಸ್ ಅನ್ನು ನಾಶಪಡಿಸಬಹುದು ಎಂದು ಆತನಿಗೆ ನಂಬಿಕೆ ಇತ್ತು. ಮಹೇಂದ್ರ ಬುಧವಾರ ರಾತ್ರಿ 9 ಗಂಟೆಗೆ ಸೀಮೆಎಣ್ಣೆ ಸೇವಿಸಿದ್ದಾನೆ.
ಆದಾಗ್ಯೂ, ಮಹೇಂದ್ರ ಆರೋಗ್ಯ ಕೆಟ್ಟ ನಂತರ ಅವನ ಕುಟುಂಬ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಬೆಡ್ ಸಿಕ್ಕದೆ ಆಸ್ಪತ್ರೆ ಆಡಳಿತವು ಅವನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದೆ. ಆ ಬಳಿಕ ಕುಟುಂಬ ಅವನನ್ನು ಹಮೀದಿಯಾ ಆಸ್ಪತ್ರೆಗೆ ಸಾಗಿಸಿದೆ. ಆದರೆ ಮಹೇಂದ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.