ಧಾರವಾಡ/ಹುಬ್ಬಳ್ಳಿ: ತೀವ್ರ ಉಸಿರಾಟದ ತೊಂದರೆಯ ಲಕ್ಷಣದಿಂದ ಮೇ.3 ರಂದು ಕೋವಿಡ್-19 ದೃಢಪಟ್ಟಿದ್ದ, ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಢಾಣಕಶಿರೂರಿನ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದು, ಮೇ.23 ರ ಸಂಜೆ ಹುಬ್ಬಳ್ಳಿಯ ಕಿಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 20 ದಿನಗಳ ಅವಧಿಯಲ್ಲಿ ತಮಗೆ ಚಿಕಿತ್ಸೆ ನೀಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಿದ ಕಿಮ್ಸ್ ತಂಡಕ್ಕೆ ಗುಣಮುಖರಾದ ಮಹಿಳೆ ಕೃತಜ್ಞತೆ ಸಲ್ಲಿಸಿದರು. ಬಾಗಲಕೋಟೆ ಜಿಲ್ಲೆಯ ಢಾಣಕಶಿರೂರಿನ ಈ ಗರ್ಭಿಣಿಗೆ ಕೊರೊನಾ ಸೊಂಕು ದೃಡಪಟ್ಟ ನಂತರ ಮಹಿಳೆ ಜೊತೆ ಪ್ರಾಥಮಿಕ ಹೊಂದಿದ್ದ 15 ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿತ್ತು.
23 ವರ್ಷದ ಮಹಿಳೆಗೆ ಕೊರೊನಾ ಸೊಂಕು ದೃಢಪಟ್ಟ ನಂತರ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ಅಲ್ಲದೆ ದೇಹದಲ್ಲಿ ಸೋಡಿಯಮ್ ಅಂಶ ಕಡಿಮೆಯಾಗಿ ಸುಸ್ತಾಗಿದ್ದರು. ಅಲ್ಸರ್ ಉಂಟಾಗಿ ಊಟ ಮಾಡಲು ಆಗುತ್ತಿರಲಿಲ್ಲ. ಹಿಮೋಗ್ಲೋಬಿನ್ ಕಡಿಮೆಯಾಗಿ ರಕ್ತ ಕಡಿಮೆಯಾದ ಪರಿಣಾಮ ಮಹಿಳೆಗೆ ಗರ್ಭಪಾತವಾಗಿತ್ತು. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಮಹಿಳೆ ಕುಟುಂಬಕ್ಕೆ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮಾತ್ರೆಗಳನ್ನು ನೀಡುವ ಮೂಲಕ ಗರ್ಭಪಾತ ಮಾಡಲಾಗಿತ್ತು. ಕೊರೊನಾ ಸೊಂಕಿನಿಂದ ಸಂಪೂರ್ಣವಾಗಿ ಗುಣಮುಖವಾದ ಬಾಣಂತಿಗೆ ಕಿಮ್ಸ್ ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟಿ, ಶುಭ ಹಾರೈಸಿ ಬೀಳ್ಕೊಟ್ಟರು
ಈ ವೇಳೆ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಜಿಪಂ ಸಿಇಓ ಡಾ.ಬಿ.ಸಿ.ಸತೀಶ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್ ಮದೀನಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಚವ್ಹಾಣ, ಉಪವೈದ್ಯಕೀಯ ಅಧೀಕ್ಷಕ ರಾಜಶೇಖರ್ ದ್ಯಾಬೇರಿ, ತಜ್ಞ ವೈದ್ಯರಾದ ಡಾ.ಈಶ್ವರ್ ಹಸಬಿ, ಡಾ.ಲಕ್ಷ್ಮೀಕಾಂತ್ ಲೋಕರೆ, ಡಾ.ಮಹೇಶ, ಆಸ್ಪತ್ರೆಯ ನರ್ಸ್, ಅರೆವೈದ್ಯಕೀಯ ಸಿಬ್ಬಂದಿ ಮತ್ತಿತರರು ಇದ್ದರು.