– ಅನಾಥ ಮಕ್ಕಳ ಪೋಷಣೆಗೆ ಹೊಸ ಬಾಲ ಸೇವೆ ಯೋಜನೆ
ಬೆಂಗಳೂರು: ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಮಾಸಿಕ 3,500 ರೂ. ನೀಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮಹತ್ವದ ಘೋಷಣೆ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು ಅನಾಥ ಮಕ್ಕಳಿಗೆ ಬಾಲಸೇವಾ ಯೋಜನೆ ಆರಂಭಿಸುವದಾಗಿ ಘೋಷಿಸಿದರು. ತಂದೆ-ತಾಯಿ, ಏಕ ಪೋಷಕರು, ದತ್ತು ಪೋಷಕರು, ಕಾನೂನು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ವಿವಿಧ ನೆರವುಗಳ ಘೋಷಣೆ ಮಾಡಿದರು. ವಿಸ್ತೃತ ಕುಟುಂಬದ ಸದಸ್ಯರ ಆರೈಕೆಯಲ್ಲಿರುವ ಮಕ್ಕಳಿಗೆ 3,500 ರೂ ಮಾಸಾಶನ ನೀಡಲಾಗುವುದು ಎಂದರು.
ಪೋಷಕರು ಇಲ್ಲದ ಮಕ್ಕಳನ್ನು ನೊಂದಾಯಿತ ಮಕ್ಕಳ ಪಾಲನಾ ಕೇಂದ್ರಗಳಿಗೆ ದಾಖಲಿಸಿ ಆರೈಕೆ ಮಾಡಲಾಗುವುದು. ಅನಾಥ ಮಕ್ಕಳಿಗೆ ಕಿತ್ತೂರು ಚೆನ್ನಮ್ಮ, ಮೊರಾರ್ಜಿ ದೇಸಾಯಿಗಳಂಥ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಹತ್ತನೇ ತರಗತಿ ಮುಗಿಸಿದ ಮಕ್ಳಳ ಕೌಶಲ್ಯಾಭಿವೃದ್ಧಿ ಅಥವಾ ಉನ್ನತ ಶಿಕ್ಷಣಕ್ಕೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಗುವುದು ಎಂದು ತಿಳಿಸಿದರು.
21 ವರ್ಷ ಮೇಲ್ಪಟ್ಟ ಹೆಣ್ಣುಮಕ್ಳಳ ಮದುವೆ ಅಥವಾ ಉನ್ನತ ಶಿಕ್ಷಣಕ್ಕೆ 1 ಲಕ್ಷ ರೂ ಸಹಾಯ ಧನದ ನೆರವು ಘೋಷಿಸಿದರು. ಕೋವಿಡ್ ನಿಂದ ಅನಾಥವಾದ ಮಗುವಿಗೆ ತಲಾ ಒಬ್ಬ ಮಾರ್ಗದರ್ಶಿ ನೇಮಿಸಿ ಎಲ್ಲ ನೆರವು ನೀಡುವದಾಗಿ ಘೋಷಿಸಿದರು.