ಚಿಕ್ಕಬಳ್ಳಾಪುರ: ಕೊರೊನಾಗೆ ಹೆದರಿದ ವ್ಯಕ್ತಿಯೋರ್ವ ಕೋವಿಡ್-19 ಆಸ್ಪತ್ರೆಯಿಂದ ಪರಾರಿಯಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕು ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ 55 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾದವ. ಒಂದು ತಿಂಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದು ಹೋಗಿದ್ದ ಈತನಿಗೆ, ಗ್ರಾಮದಲ್ಲಿ ಕೆಲವರು ನಿನಗೆ ಕೊರೊನಾ ಬಂದಿದೆ ಅಂತ ಹೆದರಿಸುತ್ತಿದ್ದರಂತೆ. ಇದರಿಂದ ವಿಚಲಿತನಾದ ಈತ ಅಂದಿನಿಂದ ಕೊರೊನಾ ಭಯದಲ್ಲೇ ಬದುಕನ್ನು ದೂಡುತ್ತಿದ್ದ.
ಮನೆಗೂ ಹೋಗದೆ ಗ್ರಾಮದಲ್ಲಿ ತೋಟದ ಮನೆಯಲ್ಲಿ ವಾಸ ಮಾಡ್ತಾ ಜೀವನ ಕಳೆಯುತ್ತಿದ್ದನಂತೆ. ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ಮಗ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಈತನಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು ನೆಗಟಿವ್ ಸಹ ಬಂದಿತ್ತು. ಆದರೆ ಅದ್ಯಾಕೋ ಏನೋ ಅದೇ ಭಯದಲ್ಲೇ ಇದ್ದ ಈತ, ಅಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೇ ಮನೆಯವರು ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಶಿಪ್ಟ್ ಮಾಡಿದ್ರು. ಚಿಕಿತ್ಸೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿದ್ದು ಕೋವಿಡ್ ಪಾಸಿಟಿವ್ ಎಂದು ತಿಳಿದುಬಂದಿದೆ.
ಇದರಿಂದ ಶುಕ್ರವಾರ ಸಂಜೆ ಈತನನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಇಡೀ ರಾತ್ರಿ ನಾನು ಮನೆಗೆ ಹೋಗಬೇಕು ಅಂತ ಪಟ್ಟು ಹಿಡಿದಿದ್ದಾನೆ. ಕೊನೆಗೆ ಮನೆಗೆ ಕಳುಹಿಸಲ್ಲ ಅಂದಿದ್ದಕ್ಕೆ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕು ಗುಂತಪನಹಳ್ಳಿ ಗ್ರಾಮದ ಬಳಿ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಂದು ಮಧ್ಯಾಹ್ನ ವಿಷಯ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‍ಐ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಿಸಿದ್ದಾರೆ.
ಅಪರಿಚಿತ ವ್ಯಕ್ತಿ ಯಾರು ಅಂತ ಪತ್ತೆ ಮಾಡಲು ಮುಂದಾದಾಗ, ಕೋವಿಡ್ ಪಾಸಿಟಿವ್ ಬಂದಿದ್ದ ವ್ಯಕ್ತಿ ಅಂತ ಗೊತ್ತಾಗಿದೆ. ಸದ್ಯ ಮೃತನ ಮಗ ಹಾಗೂ ಸಂಬಂಧಿಕರು ಸಮ್ಮುಖದಲ್ಲಿ ಕೋವಿಡ್-19 ವಿಧಿವಿಧಾನಗಳಂತೆ ಅಂತ್ಯಕ್ರಿಯೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.