– ಮಳೆಗೆ ಸಿಲುಕಿದ ಸಾವಿರಾರು ಹೆಕ್ಟೇರ್ ಭತ್ತ
ಉಡುಪಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆಯಿಂದಾಗಿ ಇದೀಗ ಉಡುಪಿ ಜಿಲ್ಲೆಯ ಭತ್ತದ ಬೆಳೆಗಾರರು ನಲುಗಿಹೋಗಿದ್ದಾರೆ. ಅಕಾಲಿಕ ಮಳೆಯಿಂದ ಪೈರು ಕಟಾವು ಮಾಡಲಾಗದೆ, ಗದ್ದೆಯಲ್ಲೂ ಬಿಡಲಾಗದೆ ರೈತರನ್ನು ಪೀಕಲಾಟಕ್ಕೆ ತಳ್ಳಿದೆ.
Advertisement
ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಈ ಬಾರಿ ಭತ್ತದ ಬೆಳೆ ಬಂದಿದೆ. ಕೊರೊನಾ ಕಾಲ ಬಳಸಿಕೊಂಡಿದ್ದ ಬೇಸಾಯಗಾರರು ಪಾಳುಬಿದ್ದಿದ್ದ ಗದ್ದೆಗಳಲ್ಲಿ ಈ ಬಾರಿ ಬಿತ್ತನೆ ಮಾಡಿದ್ದರು. ಸಕಾಲಿಕ ಮಳೆ ಬೇಸಾಯಗಾರರಿಗೆ ಬೆನ್ನೆಲುಬಾಗಿ ನಿಂತಿತ್ತು. ಆದರೆ ಈ ಬಾರಿಯ ವಾಯುಭಾರ ಕುಸಿತದಿಂದ ಉಂಟಾದ ಮಳೆಯಿಂದ ಎಲ್ಲವೂ ಹಾಳಾಗುವ ಹಂತ ತಲುಪಿದೆ. ಮತ್ತೊಂದು ಕುತ್ತು ಎದುರಿಸುವಂತಾಗಿದೆ.
Advertisement
Advertisement
ಕಾಡುಪ್ರಾಣಿಗಳ ಕಾಟದಿಂದ ಹೇಗೋ ಭತ್ತದ ಬೆಳೆ ಕಾಪಾಡಿಕೊಂಡು ಈಗ ಕೊಯ್ಲಿನ ಋತುವಿನ ತರಾತುರಿಯಲ್ಲಿ ಇದ್ದವರು ಮಳೆಕಾಟದಿಂದ ತತ್ತರಗೊಳ್ಳುವಂತೆ ಆಗಿದೆ. ಮುಂಗಾರು ಮಳೆಯ ಋತುವಿನಾದ್ಯಂತ ಖುಷಿಯಿಂದ ಕುಣಿದಾಡಿದ್ದ ರೈತನಿಗೆ ಕೊನೆಯ ಭಾಗದಲ್ಲಿ ಮೂರು ವಾರಗಳ ಹಿಂದೆ ಅತಿವೃಷ್ಟಿ ಹೈರಾಣಾಗಿಸಿತ್ತು. ಇದೀಗ ಬೆಳೆ ಕೊಯ್ಲಿಗೆ ಬಂದಾಗ ಬಂಗಾಳ ಕೊಲ್ಲಿಯ ಚಂಡಮಾರುತ ಏಟು ನೀಡಿದೆ. ಭತ್ತದ ಪೈರಿನ ತೆನೆ ಒಣಗಿದ್ದು ಕಟಾವಿಗೆ ರೈತರು ಸಿದ್ಧವಾಗಿದ್ದರು. ಇದೀಗ ಗದ್ದೆಯಲ್ಲಿ ನೀರು ತುಂಬಿಕೊಂಡಿದ್ದು ಕಟಾವು ಮಾಡಲು ಸಾಧ್ಯವಿಲ್ಲ. ಗದ್ದೆಯಲ್ಲಿ ಪೈರನ್ನು ಬಿಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.
Advertisement
ಕೃಷಿ ಇಲಾಖೆ ಉಡುಪಿ ಜಿಲ್ಲೆಗೆ 36 ಸಾವಿರ ಹೆಕ್ಟೇರ್ ಭತ್ತದ ಬೆಳೆ ಟಾರ್ಗೆಟ್ ಕೊಟ್ಟಿತ್ತು. ಇದನ್ನು ಉಡುಪಿಯ ಬೇಸಾಯಗಾರರು ತಲುಪಿದ್ದರು. ಕೊರೊನ ಹಿನ್ನೆಲೆ ಊರಿಗೆ ಬಂದಿದ್ದವರು ಸಹ ಬೇಸಾಯದಲ್ಲಿ ತೊಡಗಿದ್ದರು. ಇಳುವರಿ ಕೂಡ ಚೆನ್ನಾಗಿ ಬಂದಿತ್ತು.
ಸಾಂಕ್ರಾಮಿಕ ಸಂಕಷ್ಟದ ನಡುಗೆ ಬೇಸಾಯ ಮಾಡಿ, ತೆನೆ ಇನ್ನೂ ಮಾಗದಿರುವ ಪೈರು ಕೂಡ ಗದ್ದೆಗಳಲ್ಲಿ ಅಡ್ಡಡ್ಡ ಮಲಗುತ್ತಿದೆ. ಅಷ್ಟೆ ಅಲ್ಲದೆ ಗದ್ದೆಯಲ್ಲಿ ಕೊಯ್ಲು ಮಾಡಿರುವ ಭತ್ತ ಮಳೆಗೆ ಸಿಲುಕಿ ನೆನೆಯತೊಡಗಿದೆ. ಗದ್ದೆಯಲ್ಲೇ ಮೊಳಕೆಯೊಡೆಯಲು ಆರಂಭವಾಗಿದೆ. ಕಟಾವು ಮಾಡಿಟ್ಟದ್ದೂ ಮಳೆಗೆ ಸಿಲುಕಿ ಒಣಗುತ್ತಿಲ್ಲ. ಉಡುಪಿ, ಕಾಪು, ಕಾರ್ಕಳ, ಬ್ರಹ್ಮಾವರ, ಕುಂದಾಪುರ, ಸಿದ್ದಾಪುರ, ಬೈಂದೂರು ತಾಲೂಕಿನ ಸಾವಿರಾರು ಮಂದಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಳೆದ ಭತ್ತ ಒದ್ದೆಯಾದರೆ ಭತ್ತದ ಗುಣಮಟ್ಟ ಕುಸಿಯಲಿದೆ. ಇದೀಗ ಮಳೆಯಾಗುತ್ತಿರುವುದರಿಂದ ಭತ್ತದ ಕೊಯ್ಲು ಕೆಲಸ ನಡೆಯುತ್ತಿದ್ದಾಗ, ಅದು ಒದ್ದೆಯಾದರೆ ಭತ್ತದಲ್ಲಿ ತೇವಾಂಶ ಉಳಿದು ಗುಣಮಟ್ಟ ಕಮ್ಮಿಯಾಗಲಿದೆ. ಭತ್ತ, ಅಕ್ಕಿಯನ್ನು ಶೇಖರಣೆ ಮಾಡುವುದು ಕಷ್ಟ ಆಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಮದುಬೆಟ್ಡುವಿನ ರೈತ ಜೆರೋಮ್ ಅಂದ್ರಾದೆ, ಮೂರು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿ 150 ದಿನ ಕಳೆದಿದೆ. ಮಳೆ ಬಂದು ತಕ್ಷಣ ಕಟಾವು ಮಾಡಿದರೆ ಮಷೀನಿಗೆ ಸಿಲುಕಿ ಭತ್ತ ಪುಡಿಯಾಗುತ್ತದೆ. ಹಾಗಂತ ಒಣಗುವ ತನಕ ಗದ್ದೆಯಲ್ಲಿ ಬಿಟ್ಟರೆ ಇಳುವರಿ ಉದುರಿ ಹೋಗುತ್ತದೆ. ವಾರದ ಹಿಂದೆ ಕಟಾವು ಮಾಡಲು ತಯಾರಿ ನಡೆಸಿದ್ದೆ ಆದರೆ ಏಕಾಏಕಿ ಮಳೆ ನಮ್ಮ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.