ದಾವಣಗೆರೆ: ಕೊರೊನಾ ಎರಡನೇ ಅಲೆಯಲ್ಲಿ ನಗರಗಳಿಗಿಂತ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿದೆ. ಹೀಗಾಗಿ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿಯ ಗ್ರಾಮಸ್ಥರು ಇಡೀ ಗ್ರಾಮವನ್ನೇ ದಿಗ್ಬಂಧನ ಮಾಡಿಕೊಂಡಿದ್ದಾರೆ.
ದಾವಣಗೆರೆಯ 70 ರಷ್ಟು ಗ್ರಾಮಗಳಿಗೆ ಸೋಂಕು ಹೆಚ್ಚಾಗಿದ್ದು, ಇದರಿಂದ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿಯ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಮಾಡಿಕೊಂಡಿದ್ದಾರೆ. ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಿದ್ದು, ಎರಡನೇ ಅಲೆಯಲ್ಲಿ ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಇಡೀ ಗ್ರಾಮಸ್ಥರು ದಿಗ್ಬಂಧನ ಮಾಡಿಕೊಳ್ಳುವಂತೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಗ್ರಾಮಕ್ಕೆ ಎಂಟ್ರಿ ಕೊಡುವ ರಸ್ತೆಗಳನ್ನು ಬಂದ್ ಮಾಡಿದ್ದು, ರಸ್ತೆಗೆ ಮುಳ್ಳು ಹಾಕಿ ಯಾರು ಬಾರದಂತೆ ದಿಗ್ಬಂಧನ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಹಾಗೂ ಗ್ರಾಮಗಳಿಂದ ಆಗಮಿಸುವವರಿಗೆ ಸಂಪೂರ್ಣ ನಿಷೇಧ ಮಾಡಿದ್ದು, ಚಿಕ್ಕಮ್ಮನಹಟ್ಟಿಯಿಂದಲೂ ಕೂಡ ಯಾರು ಹೊರ ಹೋಗದಂತೆ ಸೂಚನೆ ನೀಡಿದ್ದಾರೆ. ಗ್ರಾಮದಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಂಡು, ಗುಂಪು ಸೇರದಂತೆ, ಅನಾವಶ್ಯಕ ಕೂತು ಮಾತನಾಡದಂತೆ ಡಂಗೂರ ಸಾರಿದ್ದಾರೆ. ಹೀಗೆ ತಮ್ಮ ಗ್ರಾಮಕ್ಕೆ ಕೊರೊನಾ ಎಂಟ್ರಿ ಕೊಡದ ಹಾಗೆ ಹಾಗೂ ಸೋಂಕು ನಿಯಂತ್ರಣ ಮಾಡಲು ಇಡೀ ಗ್ರಾಮಸ್ಥರು ಕ್ರಮ ಕೈಗೊಂಡಿದ್ದಾರೆ.