-ಮಗನ ಮದ್ವೆ, ಸತ್ಯನಾರಾಯಣ ಪೂಜೆಯಲ್ಲಿ ಸೋಂಕಿತ ಭಾಗಿ
ಹಾವೇರಿ: ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಐವತ್ತೈದು ವರ್ಷದ ಕೊರೊನಾ ಸೋಂಕಿತ ಮೃತಪಟ್ಟಿದ್ದು, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಆತಂಕ ಮನೆ ಮಾಡಿದೆ.
ಸಾವನ್ನಪ್ಪಿದ್ದ ವ್ಯಕ್ತಿ ರಾಣೇಬೆನ್ನೂರು ಮೂಲದವರಾಗಿದ್ದು ಜೂನ್ 29ರಂದು ಮಗನ ಮದುವೆ ಮಾಡಿದ್ದರು. ಜುಲೈ 3ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.
ಜುಲೈ 4ರಂದು ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಜ್ವರ ಹೆಚ್ಚಾಗಿದ್ದರಿಂದ ಸೋಂಕಿತ ಜುಲೈ 5 ರಂದು ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತ ಸೋಂಕಿತನ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 50ಕ್ಕೂ ಅಧಿಕ ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.