– ಪತ್ನಿ ಮೂವರು ಮಕ್ಕಳಿಗೆ ನೀಡಿ, ತಾನೂ ಕುಡಿದ
ರಾಯ್ಪುರ: ವ್ಯಕ್ತಿಯೊಬ್ಬ ತೀವ್ರ ಆರ್ಥಿಕ ಸಮಸ್ಯೆಯಿಂದಾಗಿ ಕೊರೊನಾಗಾಗಿ ಔಷಧಿ ಎಂದು ಸುಳ್ಳು ಹೇಳಿ ತನ್ನದೇ ಕುಟುಂಬದ ಐವರಿಗೆ ವಿಷ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.
ಖರೋರಾ ಗ್ರಾಮದ ನಿವಾಸಿ ನಾರಾಯಣ್ ದೇವಾಂಗನ್ ಎಂಬಾತ ತನ್ನ ಕುಟುಂಬಸ್ಥರಿಗೆ ವಿಷ ನೀಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಇದೀಗ ಐವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷ ಸೇವಿಸಿದವರನ್ನು ಪತ್ನಿ ದಾಮಿನಿ (30), ಇಬ್ಬರು ಹೆಣ್ಣು ಮಕ್ಕಳಾದ ಪ್ರಿಯಾ (11) ಮತ್ತು ಗಾಯತ್ರಿ (10) ಹಾಗೂ ಮಗ ಕುಲೇಶ್ವರ (7) ಎಂದು ಗುರುತಿಸಲಾಗಿದೆ. ಇವರಿಗೆಲ್ಲಾ ಕೋವಿಡ್ -19 ಸೋಂಕನ್ನು ಎದುರಿಸಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸುಳ್ಳು ಹೇಳಿ ವಿಷ ಕುಡಿಸಿದ್ದಾನೆ. ನಾರಾಯಣ್ ದಿವಾಂಗನ್ ತನ್ನ ಕುಟುಂಬದ ಎಲ್ಲರಿಗೂ ವಿಷ ನೀಡಿದ ನಂತರ ತಾನೂ ಅದೇ ವಿಷವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆ ಕಳೆದ ಐದು ತಿಂಗಳುಗಳಿಂದ ಕೆಲಸ ಇಲ್ಲದೆ ಕುಟುಂಬ ನಿರ್ವಹಣೆಗೆ ಹಣವೂ ಇಲ್ಲದೆ ಪರದಾಡುತ್ತಿದ್ದನು. ಕೆಲವು ತಿಂಗಳ ಹಿಂದೆ ತನ್ನ ಕೃಷಿ ಭೂಮಿಯನ್ನು ಸಹ ಮಾರಾಟ ಮಾಡಿದ್ದನು. ಆದರೆ ವಿಪರೀತ ಸಾಲ ಮಾಡಿಕೊಂಡಿದ್ದನು. ಇದಲ್ಲದೇ ಆತ ಕುಡಿತದ ದಾಸನಾಗಿದ್ದನು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ದೇವಾಂಗನ್ ಕೊರೊನಾ ಸೋಂಕು ನಿವಾರಣೆಗೆ ಔಷಧಿ ತಂದಿದ್ದೇನೆ ಎಂದು ಪಾನೀಯದೊಳಗೆ ಮಿಕ್ಸ್ ಮಾಡಿ ಕೊಟ್ಟಿದ್ದಾನೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.