– ಮಣಪ್ಪುರಂ ಫೈನಾನ್ಸ್ ಶಾಪ್‍ಗೆ ಕನ್ನ ಹಾಕುತ್ತಿದ್ದ ಖದೀಮರು
ಬೆಂಗಳೂರು: ಮಣಪ್ಪುರಂ ಫೈನಾನ್ಸ್ ಶಾಪ್‍ಗೆ ಕನ್ನ ಹಾಕುತ್ತಿದ್ದ ಕಳ್ಳರ ಪ್ಲಾನ್ ಕೊನೆಯ ಕ್ಷಣದಲ್ಲಿ ಕೈಕೊಟ್ಟಿದ್ದು, ಭಾರೀ ಪ್ರಮಾಣದ ಕಳ್ಳತನ ತಪ್ಪಿದಂತಾಗಿದೆ.
ಬ್ಯಾಡರಹಳ್ಳಿಯ ದೊಡ್ಡಗೊಲ್ಲರಹಟ್ಟಿ ಬಳಿಯಿರುವ ಮಣಪ್ಪುರಂ ಗೋಲ್ಡ್ ಶಾಪ್‍ಗೆ ಭಾನುವಾರ ರಾತ್ರಿ ಖದೀಮರು ಕನ್ನ ಹಾಕಲು ಯತ್ನಿಸಿದ್ದು, ಕೊನೆಯ ಹಂತದಲ್ಲಿ ಸಂಚು ವಿಫಲವಾಗಿದೆ. ವ್ಯವಸ್ಥಿತ ಸಂಚು ರೂಪಿಸಿ ಕಳೆದ ಭಾನುವಾರ ರಾತ್ರಿ ದರೋಡೆಕೋರರು ಫೀಲ್ಡ್ ಗೆ ಇಳಿದಿದ್ದರು. ಎರಡನೇ ಮಹಡಿಯಲ್ಲಿರುವ ಗೋಲ್ಡ್ ಶಾಪ್‍ನಲ್ಲಿನ ಚಿನ್ನ ಕದಿಯಲು ಮೂರನೇ ಮಹಡಿಗೆ ಎಂಟ್ರಿ ಕೊಟ್ಟಿದ್ದ ಖದೀಮರು, ಎರಡನೇ ಮಹಡಿಯಲ್ಲಿರುವ ಎಸ್.ಆರ್.ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಹೊಂದಿಕೊಂಡಿರುವ ಬಾಗಿಲು ಒಡೆದು ಖದೀಮರು ಒಳ ನುಗಿದ್ದರು.
ಬಳಿಕ ಡ್ರಿಲ್ಲಿಂಗ್ ಮಷೀನ್ ಸಹಾಯದಿಂದ ನೆಲ ಕೊರೆಯಲು ಆರಂಭಿಸಿದ್ದಾರೆ. ನೆಲ ಕೊರೆಯುವಲ್ಲಿ ಯಶಸ್ವಿ ಹಂತದಲ್ಲಿರುವಾಗಲೇ ಡ್ರಿಲ್ಲಿಂಗ್ ಯಂತ್ರದ ಮೊಳೆ ಕೈಕೊಟ್ಟಿದೆ. ಸಿಲುಕಿದ ಮೊಳೆ ತೆಗೆಯಲು ದರೋಡೆಕೋರರು ಪರದಾಡಿದ್ದು, ನಿರಂತರ ಪ್ರಯತ್ನದ ನಡುವೆಯೂ ಪ್ಲಾನ್ ಸಫಲವಾಗಿಲ್ಲ. ಬೇರೆ ವಿಧಿಯಿಲ್ಲದೆ ತರಬೇತಿ ಕೇಂದ್ರದಲ್ಲಿದ್ದ 2 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಅಲ್ಲದೆ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಸಿಸಿಟಿವಿ ಡಿವಿಆರ್ ಸಹ ಕದ್ದೊಯ್ದಿದ್ದಾರೆ. ಘಟನೆ ಸಂಬಂಧ ಕಂಪ್ಯೂಟರ್ ತರಬೇತಿ ಕೇಂದ್ರದ ಮಾಲೀಕ ರಮೇಶ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.