ಕೈರೋ: ಈಜಿಪ್ಟ್ ನ ಸೂಯೆಜ್ ಕಾಲುವೆಯಲ್ಲಿ ಮಾರ್ಚ್ 23ರಿಂದ ಮರಳಿನಲ್ಲಿ ಸಿಕ್ಕಿಹಾಕಿಕೊಂಡು ನಿಂತಲ್ಲೇ ನಿಂತು ಸಂಚಾರ ದಟ್ಟಣೆಗೆ ಕಾರಣವಾಗಿದ್ದ ದೈತ್ಯಾಕಾರದ ಕಂಟೇನರ್ ಹಡಗು ಚಲಿಸಲು ಆರಂಭಿಸಿದ್ದು, ಕಡೆಗೂ ತೇಲುತ್ತಾ ಸಾಗಿದೆ.
ಎವರ್ ಗ್ರೀನ್ ಕಂಪೆನಿಯ ಎವರ್ ಗಿವನ್ ಹಡಗು ಮಾರ್ಚ್ 29ರಂದು ತೇಲುತ್ತಾ ಸಾಗುವುದನ್ನು ಈಜಿಪ್ಷಿಯನ್ ಟಿವಿ ಮತ್ತು ಹಡಗಿನ ಟ್ರ್ಯಾಕರ್ ಕಾಲುವೆಯ ಮಧ್ಯದಲ್ಲಿ ಇರುವುದನ್ನು ತೋರಿಸಿವೆ. ದೊಡ್ಡ ಮಟ್ಟದ ಗಾಳಿ, ಟಗ್ ಬೋಟ್ ಗಳ ಸಹಾಯದಿಂದಾಗಿ ಮರಳಿನಲ್ಲಿ ಹೂತಿದ್ದ ಬೃಹತ್ ಹಡಗು ಮತ್ತೆ ಮುಂದೆ ಸಾಗುವಂತಾಗಿದೆ.
ಎವರ್ ಗಿವನ್ ಹಡಗು ಭಾಗಶಃ ಮತ್ತೆ ತೇಲುತ್ತಿದೆ ಹಾಗೂ ಸರಿಯಾದ ದಿಕ್ಕಿನೆಡೆಗೆ ತಿರುಗಿದೆ ಎಂದು ಸೂಯೆಜ್ ಕಾಲುವೆ ಪ್ರಾಧಿಕಾರ (ಎಸ್‍ಸಿಎ) ತಿಳಿಸಿತ್ತು. ವಿಶ್ವದ ಅತ್ಯಂತ ದಟ್ಟಣೆಯ ಹಡಗುಗಳ ಸೂಯೆಜ್ ಕಾಲುವೆಯಾಗಿದ್ದು, ಕಳೆದ ಒಂದು ವಾರದಿಂದ ಬೃಹತ್ ಹಡಗು ನಿಂತಿದ್ದಕ್ಕೆ ಇತರ ಹಡಗುಗಳ ಓಡಾಟಕ್ಕೆ ತಡೆಯಾಗಿತ್ತು. ಇದರಿಂದಾಗಿ ಜಾಗತಿಕ ವ್ಯಾಪಾರ-ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಿತ್ತು.
ಶೀಘ್ರವೇ ಸೂಯೆಜ್ ಕಾಲುವೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು ಸೂಯೆಜ್ ಪ್ರಾಧಿಕಾರದ ಮುಖ್ಯಸ್ಥ ಅಡ್ಮಿರಲ್ ಒಸಾಮ ರಬೀ ಘೋಷಣೆ ಮಾಡಿದ್ದಾರೆ. ಕಾಲುವೆ ಮೂಲಕ ಸಾಗಬೇಕಿದ್ದ 450ಕ್ಕೂ ಹೆಚ್ಚು ಹಡಗುಗಳು ನಿಂತಿರುವ ಎವರ್ ಗಿವನ್ ಹಡಗಿನ ಸಮೀಪವೇ ಕಾಯುತ್ತಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಪೂರೈಕೆ ಜಾಲಕ್ಕೆ ಪೆಟ್ಟು ಬಿದ್ದಿದೆ. ಒಟ್ಟು ಜಾಗತಿಕ ವ್ಯಾಪಾರ-ವ್ಯವಹಾರಗಳ ಹಡಗುಗಳ ಪೈಕಿ ಶೇ.12ರಷ್ಟು ಇದೇ ಮಾರ್ಗದಲ್ಲಿ ಸಾಗುತ್ತವೆ.
ಎವರ್ ಗಿವನ್ ಹಡಗು ತುಂಬಾ ಬೃಹತ್ ಆಗಿದ್ದು, 1312 ಅಡಿ ಉದ್ದ ಹಾಗೂ 193 ಅಡಿ ಅಗಲ, ಒಟ್ಟು 2,20,000 ಟನ್ ತೂಕದ್ದಾಗಿದೆ. ಪನಾಮದಲ್ಲಿ ನೋಂದಣಿ ಆಗಿರುವ ಈ ಹಡಗನ್ನು ತೈವಾನ್ ಮೂಲದ ಹಡಗು ಕಂಪೆನಿ ನಿರ್ವಹಣೆ ಮಾಡುತ್ತಿದೆ. ಎವರ್ ಗಿವನ್ ಹಡಗು ಮತ್ತೆ ತೇಲುತ್ತಿದ್ದಂತೆ ಸಂತೋಷದ ವ್ಯಾಪಾರಸ್ಥರಿಗೆ ಸಂತೋಷವಾಗಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸೂಯೆಜ್ ಕಾಲುವೆಯಲ್ಲಿ ಈ ಹಡಗು ನಿಂತಿದ್ದಾಗಿನಿಂದ ಕಚ್ಚಾ ತೈಲ ಬೆಲೆಯಲ್ಲೂ ಏರಿಕೆಯಾಗಿತ್ತು.