ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ಬೆಂಗಳೂರಿನ ಡೆಪ್ಯುಟಿ ಕಮಿಷನ್ ಆಫ್ ಪೊಲೀಸ್ ಸಿಎಆರ್ (ಸಿಟಿ ಆರ್ಮಡ್ ರಿಸರ್ವ್) ಯುನಿಟ್ಸ್ ಹೆಡ್ ಕ್ವಾಟರ್ಸ್‍ಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.
ಜಿಲ್ಲೆಗೆ ನೂತನ ಎಸ್ಪಿಯಾಗಿ 2016ರ ಐಪಿಎಸ್ ಕೇಡರ್ ನ ಕ್ಷಮಾ ಮಿಶ್ರಾ ಅರವನ್ನು ನಿಯೋಜಿಸಿದೆ. ಕ್ಷಮಾ ಅವರು ಮೊದಲು ಬೆಂಗಳೂರಿನ ಸಿಐಡಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯವೇ ಕೊಡಗಿನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
2018ರಲ್ಲಿ ಜಿಲ್ಲೆಯ ಆಗಮಿಸಿದ್ದ ಡಾ.ಸುಮನ್ ಡಿ.ಪನ್ನೇಕರ್ ಅವರು ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದರು. 2018 ಹಾಗೂ 19 ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರವಾಹದ ವೇಳೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದರು. ಅಲ್ಲದೆ ಟಿಂಬರ್ ಮಾಫಿಯಾ, ಗಾಂಜಾ ಹಾಗೆಯೇ ಮರಳು ದಂಧೆ ಕೋರರನ್ನು ಹೆಡೆಮುರಿ ಕಟ್ಟಿದ್ದರು.
ಕೊರೊನಾ ಪರಿಸ್ಥಿತಿಯಲ್ಲಿ ನೆರೆಯ ಗಡಿ ಜಿಲ್ಲೆಗಳನ್ನು ಬಂದ್ ಮಾಡಿ ಸುಮನ್ ಡಿ.ಪನ್ನೇಕರ್ ಜಿಲ್ಲೆಯ ಜನತೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇತ್ತೀಚೆಗೆ 2020ರ ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಎನ್‍ಡಿಆರ್‍ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಜೊತೆಗೆ ಜಂಟಿ ಕಾರ್ಯಾಗಾರ ನಡೆಸಿದ್ದರು.