ಮಡಿಕೇರಿ/ಕಾರವಾರ: ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಯ ಹಲವು ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.
ಉತ್ತರ ಕನ್ನಡದಲ್ಲಿ ಬೆಳಗ್ಗೆ ಮಳೆ ಸುರಿದರೆ, ಕೊಡಗಿನ ಹಲವು ಭಾಗಗಳಲ್ಲಿ ಮಧ್ಯಾಹ್ನ ವರುಣ ಅಬ್ಬರಿಸಿದ್ದಾನೆ. ಮಡಿಕೇರಿ, ಮೇಕೇರಿ, ಕಡಗದಾಳು, ನಾಪೋಕ್ಲು ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಬೆಳಗ್ಗೆಯಿಂದ ಮೋಡಕವಿದ ಮತ್ತು ಭಾರೀ ಸೆಕೆಯಿಂದ ಕೂಡಿದ ವಾತಾವರಣವಿತ್ತು. ಮಧ್ಯಾಹ್ನ ಮೂರು ಗಂಟೆ ಬಳಿಕ ಗುಡುಗು, ಸಿಡಿಲು ಸಹಿತ ಮಳೆ ಆರಂಭವಾಯಿತು.
ಜಿಲ್ಲೆಯ ಹಲವೆಡೆ ಕೆಲವು ದಿನಗಳಿಂದ ಪ್ರತಿ ದಿನ ಮಳೆ ಅಬ್ಬರಿಸುತ್ತಲೇ ಇದೆ. ಜಿಲ್ಲೆಯಲ್ಲಿ ಲಾಕ್‍ಡೌನ್ ಇರುವುದರಿಂದ ಜನರೆಲ್ಲರೂ ಮನೆ ಸೇರಿಕೊಂಡಿದ್ದಾರೆ. ಹೀಗಾಗಿ ಮಳೆಯಿಂದ ಸದ್ಯ ಜನ ಜೀವನಕ್ಕೆ ಅಷ್ಟೇನು ಸಮಸ್ಯೆ ಎದುರಾಗಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಹ ಅಬ್ಬರದ ಮಳೆ ಸುರಿದಿದ್ದು, ಬೆಳಗ್ಗೆ ಬಿಸಲಿನ ಧಗೆಯಲ್ಲಿ ಬೆಂದಿಂದ್ದ ಕರಾವಳಿ ಜನರಿಗೆ ವರುಣ ತಂಪೆರೆದಿದ್ದಾನೆ. ಈ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾತ್ರ ಹೆಚ್ವು ಮಳೆ ಬಿದ್ದಿತ್ತು. ಕರಾವಳಿ ಭಾಗದಲ್ಲಿ ಬಿಸಿಲ ದಗೆ ಮುಂದುವರೆದಿತ್ತು. ಆದರೆ ಇಂದು ಗುಡುಗು ಸಹಿತ ಅಬ್ಬರದ ಮಳೆ ಸುರಿದಿದ್ದು, ತಾಪಮಾನದಲ್ಲಿ ಇಳಿಕೆ ಕಂಡಿದೆ.