– ಎಚ್ಚರಿಕೆಯಿಂದಿರುವಂತೆ ಹೇಳಿದ ಜಿಲ್ಲಾಡಳಿತ
– ಮಡಿಕೇರಿಯಲ್ಲಿ ಗುಡ್ಡ ಕುಸಿತ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಜೋರು ಗಾಳಿ- ಮಳೆ ಬೀಳುತ್ತಿರುವ ಪ್ರದೇಶಗಳ ವ್ಯಾಪ್ತಿಯ ಜನತೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 74 ಮಿ.ಮಿಟರ್ ಮಳೆಯಾಗಿದೆ. ಅದರಲ್ಲೂ 104 ಗ್ರಾಮ ಪಂಚಾಯಿತಿಗಳ ಪೈಕಿ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 100 ಮಿ.ಮಿಟರ್‍ಗಿಂತಲೂ ಅಧಿಕ ಮಳೆಯಾಗಿರುವುದು ದಾಖಲಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 172 ಮಿ.ಮೀಟರ್ ಹಾಗೆಯೇ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 170.5 ಮಿ.ಮೀಟರ್ ಪ್ರಮಾಣದ ದಾಖಲೆಯ ಮಳೆಯಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಆಗಸ್ಟ್ 7 ರವರಗೆ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ಆದ್ದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಹೆಚ್ಚಿನ ಮಳೆಯಾಗುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತವಾಗುವ ಹಾಗೂ ತಗ್ಗಿನ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆಗಳು ಇರುವುದರಿಂದ ಅಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಬೇಕು. ಮಡಿಕೇರಿ ನಗರದ ಓಂಕಾರೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ.
ಒಂದು ವೇಳೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ವಿಪತ್ತುಗಳು ಎದುರಾದರೆ ಜಿಲ್ಲಾಡಳಿತದ ತುರ್ತು ದೂರವಾಣಿ ಸಂಖ್ಯೆ 8550001077 ಸಂಪರ್ಕಿಸಲು ಜಿಲ್ಲಾಡಳಿತ ಮನವಿ ಮಾಡಿದೆ.