ಉಡುಪಿ: ಕರಾವಳಿ ಜಿಲ್ಲೆಗಳಿಗೆ ವಿಶೇಷವಾಗಿ ಸಮುದ್ರತೀರಕ್ಕೆ ಪ್ರವಾಸ ಬರಬೇಡಿ ಎಂದು ಎಷ್ಟು ಎಚ್ಚರಿಕೆ ನೀಡಿದರೂ ಜನ ಕೇಳುತ್ತಿಲ್ಲ. ವೀಕೆಂಡ್ ಬಂದ್ರೆ ಈಗಲೂ ನೂರಾರು ಜನ ಸಮುದ್ರ ತೀರದತ್ತ ಮುಖ ಮಾಡುತ್ತಾರೆ. ಹೀಗೆ ಕೊಡಗು ಮತ್ತು ಮೈಸೂರು ಭಾಗದಿಂದ ಬಂದಿದ್ದ ಯುವಕ-ಯುವತಿಯರ ತಂಡವೊಂದು ಮಲ್ಪೆಗೆ ಆಗಮಿಸಿತ್ತು. ಈ ವೇಳೆ ಸಮುದ್ರದ ಅಲೆಗಳಲ್ಲಿ ಈಜುತ್ತಿದ್ದಾಗ ನೀರು ಪಾಲಾದ ಘಟನೆ ಮಲ್ಪೆ ಸಮುದ್ರ ತೀರದಲ್ಲಿ ನಡೆದಿದೆ.
Advertisement
ಮೈಸೂರಿನ ಯುವಕ ಹಾಗೂ ಕೊಡಗಿನಿಂದ ಮೂವರು ಯುವತಿಯರು ಬೀಚ್ ಗೆ ಬಂದಿದ್ದರು. ನಾಲ್ವರ ಪೈಕಿ ಓರ್ವ ಯುವಕ ಹಾಗೂ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಕೊಡಗಿನ ಯುವತಿ ದಶಮಿ (20) ಸಮುದ್ರದಲ್ಲಿ ಕಣ್ಮರೆಯಾಗಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಗಾಗಿ ಹುಡುಕಾಟ ನಡೆಯುತ್ತಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಅಲೆಗಳ ತೀವ್ರತೆ ಹೆಚ್ಚಿರುವುದರಿಂದ ಸಮುದ್ರಕ್ಕೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆಯ ಹೊರತಾಗಿಯೂ ತಂಡ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳ ಆರ್ಭಟಕ್ಕೆ ಸಿಲುಕಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದರೂ ಹೊರ ಜಿಲ್ಲೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ.