– ನಷ್ಟದಲ್ಲಿ ಕಾಫಿ ಬೆಳೆಗಾರರು
ಮಡಿಕೇರಿ: ಕಿತ್ತಳೆ ನಾಡು ಕೊಡಗಿನ ರೈತರ ಆದಾಯ ಮೂಲ ಕಾಫಿ. ಆದರೆ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ, ಪ್ರವಾಹಕ್ಕೆ ಕಾಫಿ ಸಂಪೂರ್ಣ ನೆಲಕಚ್ಚಿದೆ.
ಹೌದು. ಕೊಡಗಿನಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಫಸಲು ಬಿಟ್ಟಿದ್ದ ಕಾಫಿಗಿಡಗಳು ಮುರಿದು ನೆಲಕಚ್ಚಿವೆ. ಇದು ಒಂದೆರಡು ವರ್ಷಗಳ ಕಥೆಯಲ್ಲ, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ರತೀ ಮಳೆಗಾಲದಲ್ಲಿ ಭಾರೀ ಮಳೆಯಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಅದರಲ್ಲೂ ಸಣ್ಣ ಬೆಳೆಗಾರರ ಸ್ಥಿತಿಯಂತೂ ಹೇಳತೀರದಾಗಿದೆ. ಆದರೆ ಜಿಲ್ಲೆಯ, ರಾಜ್ಯದ ಅಥವಾ ಕೇಂದ್ರದ ಜನಪ್ರತಿನಿಧಿಗಳು ಕಾಫಿ ಬೆಳೆಗಾರರ ಬಗ್ಗೆ ಗಮನಹರಿಸುವುದೇ ಇಲ್ಲ. ಇದು ಹೀಗೆ ಮುಂದುವರಿದಲ್ಲಿ ಕಾಫಿತೋಟಗಳನ್ನು ಪಾಳುಬಿಡಬೇಕಾದ ದಿನಗಳು ದೂರ ಉಳಿದಿಲ್ಲ ಎನ್ನೋದು ಕಾಫಿ ಬೆಳೆಗಾರರ ಅಳಲು.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು, ಜಿಲ್ಲೆಯ ಸಾವಿರಾರು ಎಕರೆಗೆ ಪ್ರವಾಹದ ನೀರು ನುಗ್ಗಿದೆ. ನಾಲ್ಕೈದು ದಿನಗಳ ಕಾಲ ಪ್ರವಾಹದ ನೀರಿನಲ್ಲಿ ಕಾಫಿ ಗಿಡಗಳು ಮುಳುಗಿದ್ದರಿಂದ ಇಡೀ ಗಿಡಗಳೇ ಬಿರುಬಿಸಿಲಿಗೆ ಸುಟ್ಟು ಹೋದಂತೆ ಸಂಪೂರ್ಣ ಒಣಗಿ ಹೋಗಿವೆ. ಕೆಲ ರೈತರ ಹತ್ತಾರು ಎಕರೆಯ ಇಡೀ ಕಾಫಿ ತೋಟವೇ ಸಂಪೂರ್ಣ ಒಣಗಿ ಹೋಗಿವೆ. ಆದರೆ ಸರ್ಕಾರ ಮಾತ್ರ ಎನ್ ಡಿಆರ್ ಎಫ್ ನಿಯಮದ ಪ್ರಕಾರ ಒಂದು ಹೆಕ್ಟೇರ್ ಗೆ ಕೇವಲ 12 ಸಾವಿರದಂತೆ ಕೇವಲ 2.5 ಹೆಕ್ಟೇರ್ ಪ್ರದೇಶದ ಬೆಳೆ ನಾಶಕ್ಕೆ ಮಾತ್ರವೇ ಪರಿಹಾರ ಕೊಡುತ್ತದೆ.
ಇದರಿಂದ ಕಾಫಿ ಬೆಳೆಗಾರ ಯಾವುದನ್ನೂ ನಿಭಾಯಿಸಲು ಸಾಧ್ಯವಿಲ್ಲ. ಕಾಫಿತೋಟಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ತೋಟ ಕಾರ್ಮಿಕರ ಬದುಕು ಬೀದಿಗೆ ಬರಲಿದೆ ಎನ್ನೋದು ರೈತರು, ಕಾರ್ಮಿಕರ ಆತಂಕ. ಒಟ್ಟಿನಲ್ಲಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ಬೆಳೆ ಕಳೆದ ಮೂರು ವರ್ಷಗಳಿಂದ ಭಾರೀ ಮಳೆ ಮತ್ತು ಪ್ರವಾಹದಿಂದ ಹಾಳಾಗುತ್ತಿದ್ದು, ರೈತ ಕಂಗಾಲಾಗಿದ್ದಾನೆ.