ಮಡಿಕೇರಿ: ಕೊಡಗಿನಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಇದುವರೆಗೆ ಸುರಿದಿರುವ ಮಳೆಯಿಂದ ಆಗುತ್ತಿರುವ ಅನಾಹುತಗಳು ಮಾತ್ರ ತಪ್ಪಿಲ್ಲ. ಬೆಟ್ಟ ಕುಸಿದ ಜಾಗದಲ್ಲಿ ಮತ್ತೆ ಭೂಮಿ ಬಾಯ್ದೆರೆಯುತ್ತಿದ್ದು, ಗ್ರಾಮಸ್ಥರನ್ನು ನಿದ್ದೆಗೆಡಿಸುತ್ತಿದೆ.
Advertisement
ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ತೋಜಿಯಲ್ಲಿ ಭೂಮಿ ಮತ್ತೆ ಬಾಯ್ದೆರೆದಿದೆ. ಇದರಿಂದಾಗಿ ಐದು ಕುಟುಂಬಗಳು ಅಪಾಯ ಎದುರಿಸುತ್ತಿವೆ. ಭೂಮಿ ಬಾಯ್ದೆರೆದಿರುವುದರಿಂದ ಖಾದರ್ ಮತ್ತು ರಾಜಣ್ಣ ಇಬ್ಬರ ಮನೆಗಳ ಗೋಡೆಗಳು ಸಂಪೂರ್ಣ ಬಿರುಕುಬಿಟ್ಟಿವೆ. ಕರ್ತೋಜಿ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275 ತಡೆಗೋಡೆ ಕಾಮಗಾರಿಗೆ ಕರ್ತೋಜಿ ಬೆಟ್ಟದಿಂದ ಸಾವಿರಾರು ಲೋಡ್ ಮಣ್ಣು ತೆಗೆದಿದ್ದೇ ಈಗ ಕರ್ತೋಜಿ ಗ್ರಾಮದಲ್ಲಿ ಭೂಮಿ ಮತ್ತೆ ಬಾಯ್ದೆರೆಯೋದಕ್ಕೆ ಕಾರಣ ಎನ್ನಲಾಗಿದೆ.
Advertisement
Advertisement
ಭೂಮಿ ಬಾಯ್ದೆರೆದು ಮನೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಖಾದರ್ ಮತ್ತು ರಾಜಣ್ಣ ಅವರ ಎರಡು ಕುಟುಂಬಗಳು ಮನೆ ಖಾಲಿ ಮಾಡಿ ಬೇರೆಡೆಗೆ ತೆರಳಿದ್ದಾರೆ. ಮಂಗಳವಾರ ಸಂಜೆಯೇ ಭೂಮಿ ಬಾಯ್ದೆರೆದಿರುವ ವಿಷಯವನ್ನು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಇತ್ತ ಸುಳಿದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಕಷ್ಟಪಟ್ಟು ಮನೆಯೊಂದನ್ನು ಮಾಡಿಕೊಂಡು ಹೇಗೋ ಬದುಕು ನಡೆಸುತ್ತಿದ್ದೆವು. ಆದರೆ ಯಾರೋ ಮಾಡಿದ ತಪ್ಪಿಗೆ ನಾವು ಮನೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನ ಆಗಿಲ್ಲ ಎಂಬುದು ಸ್ಥಳೀಯರ ಆರೋಪ.