ಮಡಿಕೇರಿ: ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು, ಖಾಸಗಿ ಬಸ್‍ಗಳ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಪಟ್ಟಣ, ನಗರ ಪ್ರದೇಶಗಳಿಗೆ ಬೆರಳೆಣಿಕೆಯಷ್ಟು ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಬಸ್‍ಗಳ ಸಂಚಾರವೇ ಇಲ್ಲದಂತಾಗಿದ್ದು, ಜನ ಪರದಾಡುವಂತಾಗಿದೆ.
ಸರ್ಕಾರ ಬಸ್‍ಗಳ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಪಟ್ಟಣ, ನಗರ ಸೇರಿದಂತೆ ಪ್ರಮುಖ ಊರುಗಳಿಗೆ ಮಾತ್ರ ಬಸ್‍ಗಳು ಸಂಚರಿಸುತ್ತಿವೆ. ಹಳ್ಳಿಗಳಿಗೆ ಸರ್ಕಾರಿ ಬಸ್‍ಗಳು ಸಂಚರಿಸದಿರುವುದರಿಂದ ಗ್ರಾಮೀಣ ಭಾಗದ ಜನ ಖಾಸಗಿ ಬಸ್‍ಗಳನ್ನೇ ನಂಬಿಕೊಂಡಿದ್ದರು. ಇದೀಗ ಖಾಸಗಿ ಬಸ್‍ಗಳೂ ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿಲ್ಲ. ಹೀಗಾಗಿ ಪಡಬಾರದ ಕಷ್ಟಪಡುತ್ತಿದ್ದಾರೆ.
Advertisement
Advertisement
ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಖಾಸಗಿ ಬಸ್‍ಗಳ ಸಂಚಾರವೇ ಪ್ರಮುಖ ಸಾರಿಗೆ. ಮತ್ತೊಂದೆಡೆ ಸರ್ಕಾರಿ ಸಾರಿಗೆ ಬಸ್‍ಗಳು ಓಡಾಡುತ್ತಿದ್ದ ಗ್ರಾಮಗಳಿಗೂ ಬಸ್‍ಗಳು ಓಡಾಡುತ್ತಿಲ್ಲ. ಇದರಿಂದ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು, ಅನಾರೋಗ್ಯದ ಸಮಸ್ಯೆ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾರಿಗೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮಡಿಕೇರಿಯಿಂದ ಕೇವಲ 10, 12 ಕಿ.ಮೀ. ದೂರದಲ್ಲಿರುವ ಗ್ರಾಮಗಳಿಗೂ ಬಸ್‍ಗಳ ಸಂಚಾರವಿಲ್ಲದಂತಾಗಿದೆ. ಹೀಗಾಗಿ ನಾಪೋಕ್ಲು, ಮಾದಾಪುರ, ಗಾಳೀಬೀಡು, ಒಣಚಲು ಸೇರಿದಂತೆ ಹಲವು ಗ್ರಾಮಗಳ ಜನರು ನಡೆದುಕೊಂಡೇ ನಗರಗಳಿಗೆ ಆಗಮಿಸುತ್ತಿದ್ದಾರೆ.
Advertisement
Advertisement
ಸಾರಿಗೆ ಸಂಚಾರವಿಲ್ಲದಿರುವುದರಿಂದ ಜನರು ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಮಡಿಕೇರಿ ಸೇರಿದಂತೆ ನಗರ ಪಟ್ಟಣಗಳಿಗೆ ಹೋಗಬೇಕಾಗಿರುವುದರಿಂದ ಜನರು ಆಟೋಗಳನ್ನೇ ಆಶ್ರಯಿಸಬೇಕಾಗಿದೆ. ಬಸ್‍ಗಳ ಸಂಚಾರವಿಲ್ಲದ್ದನ್ನು ಬಂಡವಾಳವಾಗಿಸಿಕೊಂಡಿರುವ ಆಟೋ ಚಾಲಕರು 10 ಕಿ.ಮೀ. ಗೆ ವ್ಯಕ್ತಿಯೊಬ್ಬರಿಂದ 300 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ವಾಪಸ್ ಅದೇ ಆಟೋದಲ್ಲಿ ಮತ್ತೆ ಗ್ರಾಮಕ್ಕೆ ತಲುಪಬೇಕಾದರೂ ಪುನಃ 300 ರೂಪಾಯಿ ಕೊಡಬೇಕಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಎಲ್ಲ ಗ್ರಾಮೀಣ ಭಾಗಗಳಲ್ಲಿ ಬಸ್‍ಗಳನ್ನು ಓಡಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.