ಮಡಿಕೇರಿ: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತೆ ಎಂದು ಈಗಾಗಲೇ ತಜ್ಞರು ಹೇಳುತ್ತಿದ್ದು, ದಿನೇ ದಿನೇ ಮೂರನೇ ಅಲೆಯ ಭೀತಿ ಮಕ್ಕಳು ಸೇರಿದಂತೆ ಜನರನ್ನು ಕಾಡುತ್ತಿದೆ. ಇದೀಗ ಕಳೆದ 10 ದಿನಗಳಲ್ಲಿ 18 ವರ್ಷದೊಳಗಿನ 126 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ.
ಕೊಡಗಿನಲ್ಲೂ ಕೂಡ ಮೂರನೇ ಅಲೆ ಭೀತಿ ಹೆಚ್ಚಾಗಿದ್ದು, ಕಳೆದ ಹತ್ತು ದಿನಗಳಲ್ಲಿ 18 ವರ್ಷದೊಳಗಿನ 126 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಪೋಷಕರು ಅತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಸೋಂಕು ದೃಢಪಟ್ಟ ಮಕ್ಕಳು ಅರೋಗ್ಯವಾಗಿದ್ದು, ಯಾವುದೇ ಮಕ್ಕಳಲ್ಲಿ ಸಮಸ್ಯೆ ಕಂಡುಬಂದಿಲ್ಲ. ಸೋಂಕು ದೃಢಪಟ್ಟ ಮಕ್ಕಳು ಸೇರಿದಂತೆ ಪೋಷಕರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಇದುವರೆಗೂ ಯಾವುದೇ ಮಕ್ಕಳ ಸಾವು ಜಿಲ್ಲೆಯಲ್ಲಿ ಸಂಭವಿಸಿಲ್ಲ. ಜಿಲ್ಲಾ ಕೋವಿಡ್ ಅಸ್ಪತ್ರೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೋಳ್ಳಲಾಗಿದೆ. ಮಕ್ಕಳ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅರೋಗ್ಯ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಸೋಂಕಿನ ಪ್ರಕರಣಗಳು ಕಂಡುಬರುತ್ತಿದ್ದು, ಗ್ರಾಮೀಣ ಭಾಗದ ಪೋಷಕರಲ್ಲಿ ಅತಂಕ ಮನೆ ಮಾಡಿದೆ.
ಕೊಡಗಿನಲ್ಲಿ ಕೋವಿಡ್‍ಗೆ ಇಬ್ಬರು ಬಲಿ
ಕೊಡಗು ಜಿಲ್ಲೆಯಲ್ಲಿ ಇಂದು ಮತ್ತೆ 83 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಪ್ರಸ್ತುತ 609 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2 ಸಾವು ಉಂಟಾಗಿದ್ದು, ಇಲ್ಲಿಯವರೆಗೆ ಒಟ್ಟು 402 ಮರಣ ಪ್ರಕರಣಗಳು ವರದಿಯಾಗಿವೆ. ಮಡಿಕೇರಿ ತಾಲೂಕಿನಲ್ಲಿ 17, ವಿರಾಜಪೇಟೆಯಲ್ಲಿ 39 ಮತ್ತು ಸೋಮವಾರಪೇಟೆಯಲ್ಲಿ 27 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 32,498 ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 61 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ ಒಟ್ಟು 31,487 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.2.54 ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.