ಮಡಿಕೇರಿ: ದೇವಾಲಯಗಳಲ್ಲಿ ಸಾಮಾನ್ಯವಾಗಿ ಮುಡಿ, ತುಲಾಭಾರ, ಒಡವೆಗಳು, ಅನ್ನದಾನ, ಸೀರೆ, ಅಕ್ಕಿ, ಬೆಲ್ಲ ಹೀಗೆ ವಸ್ತುಗಳನ್ನು ಕಾಣಿಕೆ ಕೊಡುವುದನ್ನು ನೋಡಿದ್ದೇವೆ. ಆದರೆ ಮಣ್ಣಿನಿಂದ ತಯಾರಾದ ಜೋಡಿ ನಾಯಿಗಳ ಆಕೃತಿಗಳನ್ನು ಕಾಣಿಕೆ ಕೊಟ್ಟು ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವಂತಹ ದೇವಾಲಯ ಮಡಿಕೇರಿ ತಾಲೂಕಿನ ನಾಪೋಕ್ಲು ಹೋಬಳಿಯಲ್ಲಿದೆ.
ಶಿವನ ಮೂರ್ತಿಯ ಸನ್ನಿಧಿಯಲ್ಲಿ ಸಾವಿರಾರು ಹರಕೆಯ ಮಣ್ಣಿನ ನಾಯಿಗಳಿವೆ. ಇವೆಲ್ಲವೂ ಭಕ್ತರು ಸಲ್ಲಿಸಿರುವ ಹರಕೆ ನಾಯಿ ಆಕೃತಿಗಳಾಗಿವೆ. ಹಲವು ವರ್ಷಗಳಿಂದ ಈ ಸಂಪ್ರದಾಯವನ್ನು ಭಕ್ತರು ಪರಿಪಾಲಿಸಿಕೊಂಡು ಬರುತ್ತಿದ್ದಾರೆ.
ಈ ದೇಗುಲದಲ್ಲಿ ವರ್ಷಕ್ಕೆ ಎರಡು ಬಾರಿ ಹಬ್ಬ ಜರುಗುತ್ತದೆ. ಇದೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಲಾಕ್‍ಡೌನ್ ನಂತರ ಕಳೆದ ಮೂರು ದಿನಗಳಿಂದ ಶಾಸ್ತಾವೂ ಸನ್ನಿಧಿಯಲ್ಲಿ ಉತ್ಸವದ ಸಂಭ್ರಮ ಜರುಗುತ್ತಿದೆ. ಮುಂಜಾನೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ತೆರೆಗಳು ಸಾಂಪ್ರದಾಯಿಕ ವೇಷ ಭೂಷಣಗಳನ್ನು ಧರಿಸಿ ಧಾರ್ಮಿಕ ವಿಧಿಗಳನ್ನು ನೆರವೇರಿದವು.
ದೇವಾಲಯ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಮಣ್ಣಿನ ನಾಯಿಗಳ ಕಾಣಿಕೆ ನೀಡಿದರೆ ಬೇಡಿದ್ದೆಲ್ಲವೂ ಬೇಗ ನೆರವೇರುತ್ತದೆ ಎನ್ನುವುದು ಭಕ್ತರ ಬಲವಾದ ನಂಬಿಕೆ. ಡಿಸೆಂಬರ್‍ನಲ್ಲಿ ನಡೆಯುವ ಹಬ್ಬದಲ್ಲಿ ನಾಯಿ ಹರಕೆ ವಿಶೇಷ. ಧನು ಸಂಕ್ರಮಣದ ದಿನ ನಾಯಿಗಳನ್ನು ಸಲ್ಲಿಸಲಾಗುತ್ತದೆ. ಹಬ್ಬಕ್ಕಿಂತ ಒಂದು ತಿಂಗಳು ಮೊದಲು ವೃಶ್ಚಿಕ ಮಾಸದಲ್ಲಿ ಹರಕೆ ನಾಯಿಗಳನ್ನು ತಯಾರಿಸಲಾಗುತ್ತದೆ.
ಒಂದು ಜೊತೆ ನಾಯಿ ಆಕೃತಿ ತಯಾರಿಸಲು 350 ರೂ. ನೀಡಬೇಕು. ಸಾಂಪ್ರದಾಯಿಕ ಆಚರಣೆಯ ಬಳಿಕ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ನಾಯಿ ಹರಕೆ ಸಲ್ಲಿಸುತ್ತಾರೆ. ಇದಕ್ಕೂ ಮೊದಲು ಗ್ರಾಮದ ಕುಟುಂಬಸ್ಥರು ನಿರ್ಧಿಷ್ಟವಾಗಿದೆ ನಾಯಿ ಹರಕೆ ಸಲ್ಲಿಸುವ ಪದ್ಧತಿಯಿದೆ.
ಪ್ರತಿವರ್ಷ ಮುಖ್ಯ ಹಬ್ಬ ಮೇ ತಿಂಗಳಿನಲ್ಲಿ ಜರುಗಿದರೆ ಕಿರು ಹಬ್ಬವು ಡಿಸೆಂಬರ್‍ನಲ್ಲಿ ನಡೆಯುತ್ತಿತ್ತು. ಆದರೆ ಕೊರೊನಾ ಪರಿಣಾಮ ಲಾಕ್‍ಡೌನ್‍ನಿಂದ ಮೇ ತಿಂಗಳಲ್ಲಿ ನಡೆಯಬೇಕಿದ್ದ ಉತ್ಸವಕ್ಕೆ ಇದೀಗ ಚಾಲನೆ ಸಿಕ್ಕಿ ಉತ್ಸವಕ್ಕೆ ತೆರೆ ಬಿದ್ದಿದೆ.