ಮಡಿಕೇರಿ: ಕೊಡಗಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಆರ್ಭಟ ಮುಂದುವರೆದಿದ್ದು, ಪರಿಣಾಮ ತಡೆಗೋಡೆ ಕುಸಿದು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅನಾಹುತದಿಂದ ಪಾರಾಗಿರುವ ಘಟನೆ ಮಡಿಕೇರಿಯ ರಾಜಾಸೀಟ್ ಸಮೀಪದ ಆಕಾಶವಾಣಿ ಟವರ್ ಬಳಿ ನಡೆದಿದೆ.
ನಗರದ ಮಡಿಕೇರಿ ಆಕಾಶವಾಣಿ ಬಳಿ 2018ರಲ್ಲಿ ಕುಸಿದಿದ್ದ ಜಾಗದಲ್ಲೇ ಮತ್ತೆ ಮಣ್ಣು ಕುಸಿದಿದೆ. ಎರಡು ವರ್ಷಗಳ ಹಿಂದೆ ಅಲ್ಪ ಪ್ರಮಾಣದ ಬರೆ ಕುಸಿದಿದ್ದ ಸ್ಥಳದಲ್ಲೇ ಮತ್ತೆ ಕುಸಿಯದಂತೆ ತಡೆಗೋಡೆಯನ್ನು ನಿರ್ಮಿಸಲಾಗುತಿತ್ತು. ಈ ವೇಳೆ ಮತ್ತೆ ಬರೆ ಕುಸಿದಿದ್ದು, ತಡೆಗೋಡೆ ನಿರ್ಮಿಸುತ್ತಿದ್ದ 7 ಮಂದಿ ಸ್ಥಳೀಯರು ಅಪಾಯದಿಂದ ಪಾರಾಗಿದ್ದಾರೆ.
Advertisement
Advertisement
ಪ್ರತಿನಿತ್ಯ ಗುಡ್ಡ ಜರಿದ ಸ್ಥಳದಲ್ಲೇ ಊಟ ಮಾಡುತ್ತಿದ್ದ ಕಾರ್ಮಿಕರು, ಮಧ್ಯಾಹ್ನ ಊಟ ಮುಗಿಸಿ ಸಾರುವೆ ನಿರ್ಮಿಸಿಕೊಳ್ಳಲು ಮರಗಳನ್ನು ಇಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕಳೆದ ನಾಲ್ಕೈದು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಮಣ್ಣು ಸಡಿಲಗೊಂಡಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Advertisement
Advertisement
ಇತ್ತ ಕಾವೇರಿ ಉಗಮಸ್ಥಳ ತಲಕಾವೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ನಾಪೋಕ್ಲು ಸಂಪರ್ಕ ರಸ್ತೆ ಬಂದ್ ಆಗಿದೆ. ಕಾವೇರಿ ನದಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಎರಡು ದಿನಗಳಿಂದ ಈ ಬಾಗದಲ್ಲಿ ಮಳೆ ಹೆಚ್ಚಾಗಿದೆ. ತಲಕಾವೇರಿ ಚೇರಂಗಾಲ ರಸ್ತೆ ಬಳಿ ಗುಡ್ಡ ಕುಸಿದ ಪರಿಣಾಮವಾಗಿ ಚೇರಂಗಾಲಕ್ಕೆ ಹೋಗುವ ರಸ್ತೆ ಸಂಪೂರ್ಣ ಬಂದ್ ಆಗಿದೆ.