– ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿ
– ನಿರಂತರ ಮಳೆಗೆ ವಿರಾಜಪೇಟೆ ಮಾರುಕಟ್ಟೆಯ ಕಟ್ಟಡ ಕುಸಿತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಅಲ್ಲದೇ ಭಾಗಮಂಡಲ ಮತ್ತು ತಲಕಾವೇರಿ ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜೊತೆಗೆ ರಣ ಮಳೆಗೆ ವಿರಾಜಪೇಟೆ ಪಟ್ಟಣದ ಮಾರುಕಟ್ಟೆ ಕಟ್ಟಡ ಕುಸಿದು ಬಿದ್ದಿದೆ.
Advertisement
ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಜೂನ್ ತಿಂಗಳಿನಿಂದ ಸಂಭವಿಸಿರುವ ಮಳೆ-ಗಾಳಿಯ ತೀವ್ರತೆಯ ಪ್ರಾಕೃತಿಕ ವಿಕೋಪದಿಂದಾಗಿ ಇಲ್ಲಿಯವರೆಗೂ 52.39 ಕೋಟಿ ರೂ. ನಷ್ಟ ಉಂಟಾಗಿದೆ. ಗಾಳಿ, ಮಳೆಯಿಂದ ವಿವಿಧ ಮೂಲಭೂತ ಸೌಕರ್ಯಗಳು ಸೇರಿದಂತೆ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಪರಿಣಾಮವಾಗಿ ರೂ. 52.39 ಕೋಟಿಯಷ್ಟು ಹಾನಿ ಸಂಭವಿಸಿರುವ ಕುರಿತು ಜಿಲ್ಲಾಡಳಿತ ವರದಿ ಸಂಗ್ರಹಿಸಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರೂ. 17.61 ಕೋಟಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದಂತೆ ರೂ. 2.79 ಕೋಟಿ, ವಿದ್ಯುತ್ ಇಲಾಖೆಯ ಹಾನಿಗೆ ಸಂಬಂಧಿಸಿದಂತೆ ರೂ. 2.29 ಕೋಟಿಗಳಷ್ಟು ನಷ್ಟ ಉಂಟಾಗಿದೆ.
Advertisement
Advertisement
ರಾಷ್ಟ್ರೀಯ ಹೆದ್ದಾರಿ ಹಾನಿಯಿಂದ ರೂ. 1.75 ಕೋಟಿ, ಸಣ್ಣ ನೀರಾವರಿ ಅಂರ್ತಜಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ರೂ. 21.40 ಕೋಟಿ, ಪಿ.ಎಂ.ಜಿ.ಎಸ್.ವೈ.ಯಲ್ಲಿ ರೂ. 5 ಲಕ್ಷ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ರೂ. 6.50 ಕೋಟಿ ಸೇರಿದಂತೆ ಈ ತನಕದ ಗಾಳಿ – ಮಳೆಗೆ ಒಟ್ಟು ರೂ. 52.39 ಕೋಟಿಗಳಷ್ಟು ನಷ್ಟ ಜಿಲ್ಲೆಯಲ್ಲಿ ಉಂಟಾಗಿದೆ.
Advertisement
ವಿವರಗಳು: ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 16.55 ಕಿ.ಮೀ.ನಷ್ಟು ರಾಜ್ಯ ಹೆದ್ದಾರಿ, 9.89 ಕಿ.ಮೀ. ಹಾಗೂ ಜಿಲ್ಲಾ ಮುಖ್ಯ ರಸ್ತೆ ಹಾನಿಯಿಂದ ರೂ. 15.71 ಕೋಟಿ, ಸೇತುವೆ ಮೋರಿ (4) ಹಾನಿಯಿಂದ ರೂ. 1.74 ಕೋಟಿ ಹಾಗೂ ಕಟ್ಟಡ ಹಾನಿಯಿಂದ ರೂ. 15.50 ಲಕ್ಷದಷ್ಟು ನಷ್ಟ ಸಂಭವಿಸಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ 215: ಕಿ.ಮೀ. ರಸ್ತೆ 4 ಸೇತುವೆ, 2 ಮೋರಿ, 9 ತಡೆಗೋಡೆ ಹಾನಿಯಿಂದ ರೂ. 2.79 ಕೋಟಿ ನಷ್ಟದ ಅಂದಾಜು ಮಾಡಲಾಗಿದೆ.
ವಿದ್ಯುತ್ ಇಲಾಖೆ: ವಿದ್ಯುತ್ ಇಲಾಖೆಯಲ್ಲಿ 1,358 ಕಂಬಗಳು, 85 ಟ್ರಾನ್ಸ್ ಫಾರ್ಮ್‍ಗಳು, 20.26 ಕಿ.ಮೀ.ನಷ್ಟು ವಿದ್ಯುತ್ ವಾಹಕಗಳ ಹಾನಿಯಿಂದ ರೂ. 2.29 ಕೋಟಿ ನಷ್ಟವಾಗಿದೆ. ಎರಡು ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ಹಾನಿಯಿಂದ ರೂ. 1.75 ಕೋಟಿ, ಸಣ್ಣ ನೀರಾವರಿ ಮತ್ತು ಅಂತರ್‍ಜಲ ಅಭಿವೃದ್ಧಿ ವಿಭಾಗದಲ್ಲಿ ಒಟ್ಟು 53, ನಾಲೆ, ಏರಿ, ಕೆರೆ ಹಾನಿಯಿಂದ ರೂ. 21.40 ಕೋಟಿ, ಪಿ.ಎಂ.ಜಿ.ಎಸ್.ವೈ ರಸ್ತೆ ಹಾನಿ (0-10 ಕಿ.ಮೀ.) ರೂ. 5 ಲಕ್ಷ ಹಾನಿಯಾಗಿದೆ.
ನಗರಾಭಿವೃದ್ಧಿ ಇಲಾಖೆ: ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಮಡಿಕೇರಿ ನಗರಸಭೆ, ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಒಟ್ಟು ರೂ. 6.50 ಕೋಟಿಯಷ್ಟು ನಷ್ಟ ಉಂಟಾಗಿದೆ.
ಒಬ್ಬರು ಬಲಿ: ಮಡಿಕೇರಿ ತಾಲೂಕಿನಲ್ಲಿ ಪ್ರವಾಹದಿಂದ ಒಬ್ಬರು ಬಲಿಯಾಗಿದ್ದು, ಇವರ ಕುಟುಂಬದವರಿಗೆ ರೂ. 7 ಲಕ್ಷ ನೀಡಲಾಗಿದೆ. ಒಟ್ಟು 5 ಜಾನುವಾರುಗಳು ಸಾವಿಗೀಡಾಗಿವೆ. 2 ಮನೆಗಳು ಪೂರ್ಣ ಜಖಂ 11 ಮನೆಗಳಿಗೆ ಭಾಗಶಃ ಹಾನಿ ಹಾಗೂ 34 ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದ್ದು, ಇದರಿಂದ ರೂ. 13.50 ಲಕ್ಷ ನಷ್ಟವಾಗಿದೆ.
ಅಪಾಯ ಮಟ್ಟದಲ್ಲಿ ಕಾವೇರಿ ನದಿ: ಕೊಡಗು ಜಿಲ್ಲೆಯಲ್ಲಿ ನಿನ್ನೆಯಿಂದ ಸ್ವಲ್ಪ ಮಟ್ಟಿಗೆ ಮಳೆ ಆರ್ಭಟ ತಗ್ಗಿದ್ದರೂ ಪ್ರವಾಹದ ಆತಂಕ ಮಾತ್ರ ತಪ್ಪಿಲ್ಲ. ಭಾಗಮಂಡಲ ಮತ್ತು ತಲಕಾವೇರಿ ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಕಾವೇರಿ ನದಿ ಈಗಲೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ತಟದಲ್ಲಿರುವ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದಲ್ಲಿ ಇನ್ನೂ ಪ್ರವಾಹದ ಆತಂಕ ತಪ್ಪಿಲ್ಲ. ಅಲ್ಲಿನ ನೂರಾರು ಕುಟುಂಬಗಳು ಆತಂಕದಲ್ಲೇ ಬದುಕು ದೂಡುತ್ತಿದ್ದು ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಬಹುದೆಂದು ತೆಪ್ಪವನ್ನು ಸ್ಥಳದಲ್ಲಿಯೇ ಇರಿಸಿಕೊಂಡು ಕಾಲ ಕಳೆಯುವಂತಾಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ಭಾಗದ ಜನರು ಪ್ರವಾಹದಲ್ಲೇ ಮುಳುಗಿ ಬದುಕು ದೂಡುತಿದ್ದರೂ ಸರ್ಕಾರ ಮಾತ್ರ ಇತ್ತ ಗಮನಹರಿಸಿಲ್ಲ. ಶಾಶ್ವತ ಪರಿಹಾರ ದೊರಕಿಸಿ ಕೊಡುವುದಾಗಿ ನೀಡಿದ್ದ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ. ಹಲವು ಕುಟುಂಬಗಳು ಕಳೆದ ವರ್ಷದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದರು. ಇಂದಿಗೂ ಪರಿಹಾರ ಅಥವಾ ಬದಲಿ ವ್ಯವಸ್ಥೆ ಸಿಗದೆ ಮತ್ತೆ ಅದೇ ಸ್ಥಳದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸದ್ಯ ಪ್ರವಾಹದ ಭೀತಿ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದ್ದು ಜನರ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದಿದೆ.
ಕುಸಿದು ಬಿದ್ದ ಮಾರುಕಟ್ಟೆ ಕಟ್ಟಡ: ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ವಿರಾಜಪೇಟೆ ಪಟ್ಟಣದ ಮಾರುಕಟ್ಟೆ ಕಟ್ಟಡ ಕುಸಿದು ಬಿದ್ದಿದೆ. ಮಾರುಕಟ್ಟೆ ಕಟ್ಟಡ ಸಾಕಷ್ಟು ಶಿಥಿಲವಾಗಿತ್ತು. ಹೀಗಾಗಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿನ್ನೆಯಷ್ಟೇ ಕಟ್ಟಡದಿಂದ ವ್ಯಾಪಾರಿಗಳನ್ನು ಖಾಲಿ ಮಾಡಿಸಿದ್ದರು. ಇಂದು ಇದ್ದಕ್ಕಿದ್ದಂತೆ ಎರಡು ಮಳಿಗೆಗಳು ಕುಸಿದು ಬಿದ್ದಿವೆ. ಒಂದು ವೇಳೆ ಮಳಿಗೆಗಳಿಂದ ಅಂಗಡಿಗಳನ್ನು ಖಾಲಿ ಮಾಡಿಸಿ ವ್ಯಾಪಾರಿಗಳ ತೆರವು ಮಾಡದಿದ್ದಲ್ಲಿ ಇಂದು ಅನಾಹುತವೇ ಸಂಭವಿಸುತ್ತಿತ್ತು. ಕಟ್ಟಡ ಸಾಕಷ್ಟು ಶಿಥಿಲವಾಗಿದ್ದರೂ ಯಾವುದೇ ಮೂಲಸೌಲಭ್ಯ ನೀಡದೆ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದ್ದೇ ಕಟ್ಟಡ ಕುಸಿದು ಬೀಳಲು ಮುಖ್ಯ ಕಾರಣ ಎಂದು ಸ್ಥಳೀಯ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮನೆ ಮಹಡಿ ಹತ್ತಿ ಜೀವ ಉಳಿಸಿಕೊಂಡ ಕುಟುಂಬ – ಮೈ ಝಲ್ ಎನಿಸುವ ಕಾರ್ಯಾಚರಣೆ ದೃಶ್ಯ ಸೆರೆ