ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಇಂದು ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಮಡಿಕೇರಿಯಲ್ಲಿ ಮಧ್ಯಾಹ್ನ ಒಂದು ತಾಸು ಆರ್ಭಟಿಸಿದ ಮಳೆಗೆ ಪ್ರವಾಸಿತಾಣ ತಾಣ ರಾಜಾಸೀಟ್ ನ ಒಳಭಾಗದಲ್ಲಿನ ಬೃಹತ್ ಮರ ಧರೆಗೆ ಉರುಳಿದೆ. ಮಳೆ ಸುರಿಯುತ್ತಿದ್ದರಿಂದ ಪ್ರವಾಸಿಗರ ಓಡಾಟ ಇರದೇ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ.
ವಿರಾಜಪೇಟೆ ಮಾರ್ಗವಾದ ಮೇಕೇರಿ ರಸ್ತೆಯಲ್ಲಿಯೂ ಭಾರೀ ಗಾತ್ರದ ಮರ ಬಿದ್ದು, ವಾಹನ ಸವಾರರು ಪರದಾಟ ನಡೆಸಿದರು. ಸುಂಟಿಕೊಪ್ಪ, ಗೋಣಿಕೊಪ್ಪಲು, ಕೆದಕಲ್, ಗಾಳಿಬೀಡು, ಕಾಲೂರು, ವಿರಾಜಪೇಟೆ, ನಾಪೋಕ್ಲು, ತಲಕಾವೇರಿ ಭಾಗದಲ್ಲೂ ಧಾರಕರವಾಗಿ ಮಳೆಯಾಗಿದೆ.
ಕಳೆದ ರಾತ್ರಿಯೂ ಮಡಿಕೇರಿ ನಗರದಲ್ಲಿ ಜೋರು ಮಳೆಯಾಗಿತ್ತು. ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗೆ ಅನುಕೂಲವಾಗಿದೆ. ಹೀಗಾಗಿ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.