– ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಮುನ್ಸೂಚನೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 12 ಗಂಟೆ ಅವಧಿಯಲ್ಲಿ 170 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಭಾಗಮಂಡಲ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹಳ್ಳ ಕೊಳ್ಳಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ತಗ್ಗು ಪ್ರದೇಶದ ಹೊಲ-ಗದ್ದೆಗಳೆಲ್ಲಾ ನೀರು ತುಂಬಿ ಕೆರೆಗಳಂತೆ ಆಗಿವೆ.
Advertisement
Advertisement
ಈಗಾಗಲೇ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, 115 ಮಿಲಿ ಮೀಟರ್‌ನಿಂದ 204 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಸೋಮವಾರದಿಂದ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಹೀಗಾಗಿ ಇದೇ ತಿಂಗಳ 8ರ ವರೆಗೂ ಬೆಳಗ್ಗೆ 8 ಗಂಟೆವರೆಗೂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.