ಮಡಿಕೇರಿ: ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಆಶ್ಲೇಷ ಮಳೆ ಕೊಡಗಿಲ್ಲಿ ಆರ್ಭಟಿಸಿ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 154 ಮಿಲಿ ಮೀಟರ್ ಗೂ ಹೆಚ್ಚು ಮಳೆ ಸುರಿದಿದೆ.
ಭಾಗಮಂಡಲ ಬ್ರಹ್ಮಗಿರಿ ತಪ್ಪಲು ತಲಕಾವೇರಿ ಸುತ್ತಮುತ್ತ ಭಾರೀ ಗಾಳಿ ಮಳೆಯಾಗುತ್ತಿದೆ. ಪರಿಣಾಮ ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದ್ದು ಕಾವೇರಿ ಉಕ್ಕಿ ಹರಿದಿದೆ. ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಮಡಿಕೇರಿ ಭಾಗಮಂಡಲ, ಮಡಿಕೇರಿ ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.
Advertisement
Advertisement
ಮತ್ತೊಂದೆಡೆ ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಕಾವೇರಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹೀಗಾಗಿ ನಾಪೋಕ್ಲು ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಹಲವೆಡೆ ಕಾವೇರಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಅದೇ ನೀರಿನಲ್ಲಿ ವಾಹನ ಸವಾರರು ಪ್ರಯಾಸದಿಂದ ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಇನ್ನೂ ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ನಾಪೋಕ್ಲಿನ ಸರ್ಕಾರಿ ಹಳೇ ಶಾಲಾ ಕಟ್ಟಡ ಕುಸಿದು ಬಿದ್ದು, ನೆಲಸಮವಾಗಿದೆ. ಭಾರೀ ಮಳೆಗೆ ಮಡಿಕೇರಿ ನಗರದ ಕಾವೇರಿ ಬಡಾವಣೆ ಜಲಾವೃತವಾಗಿದೆ. ನೀರಿನಲ್ಲಿ ಆಟೋ ಬೈಕ್ ಮತ್ತು ಕಾರುಗಳು ಸಿಲುಕಿದ್ದು, ಜನರು ಪರದಾಡುತ್ತಿದ್ದಾರೆ. ಒಟ್ಟಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಡಗು ತತ್ತರಗೊಳ್ಳುವಂತಾಗಿದೆ.