ಮಡಿಕೇರಿ: ಕೊಡಗಿನಲ್ಲಿ ಕೇರಳ ಲಾಟರಿ ಟಿಕೆಟ್ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಗುಮಾನಿ ಇತ್ತಾದರೂ, ಬೆಳಕಿಗೆ ಬಂದಿರಲಿಲ್ಲ. ಆದರೆ ಇದೀಗ ಕೊಡಗಿನ ಕುಟ್ಟ ಪಟ್ಟಣದ ಅಂಗಡಿಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬೀಳುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.
ಕೇರಳ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರ ಗಮನಕ್ಕೆ ಬಂದ ತಕ್ಷಣವೇ ಕುಟ್ಟ ಸರ್ಕಲ್ ಇನ್ ಸೆಕ್ಟರ್ ಎಸ್.ಪರಶಿವಮೂರ್ತಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ನಿಷೇಧವಾಗಿರುವ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮಾಲೀಕ ಸುರೇಶ್‍ನನ್ನು ಬಂಧಿಸಿದ್ದಾರೆ.
ಕೇರಳದ 60 ಲಾಟರಿ ಟಿಕೇಟ್ ಗಳು ಮತ್ತು ಮಾರಾಟ ಮಾಡಿ ಬಂದ 1,200 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೆಲವರು ಕೇರಳದಿಂದ ಟಿಕೆಟ್ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ತಮಗೆ ಬೇಕಾದವರಿಗೆ ಮಾತ್ರ ಇದನ್ನು ನೀಡುತ್ತ, ಗೋಪ್ಯವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಕೊಡಗು ಕೇರಳದ ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಕೇರಳದ ಕೆಲಸಗಾರರು ಇಲ್ಲಿದ್ದಾರೆ. ಹೀಗಾಗಿ ಕೇರಳದ ಲಾಟರಿಗೆ ಬೇಡಿಕೆ ಇದೆ.