ಮಡಿಕೇರಿ: ಕಾಡಾನೆಗಳ ಕಾಟವನ್ನು ತಪ್ಪಿಸಲು ಅರಣ್ಯ ಇಲಾಖೆ ಹೊಸ ಪ್ಲಾನ್ ರೂಪಿಸಿದ್ದು, ಕಾಡಾನೆಗಳ ಉಪಟಳ ಮಿತಿಮೀರಿರುವ ಪ್ರದೇಶಗಳಲ್ಲಿ ಸಾಕಾನೆಗಳನ್ನು ಕಾವಲಿಗೆ ನಿಯೋಜಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ, ಉಪಟಳ ಇತ್ತೀಚೆಗೆ ಮಿತಿ ಮೀರಿದೆ. ವಿರಾಜಪೇಟೆ ತಾಲೂಕಿನ ತಿತಿಮತಿ ಅರಣ್ಯ ಅಂಚಿನಲ್ಲಿರುವ ಚನ್ನಂಗಿ ಬಸವನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ತಿತಿಮತಿ ಅರಣ್ಯ ಪ್ರದೇಶದಿಂದ ರಾತ್ರಿ ಗ್ರಾಮಕ್ಕೆ ಬರುವ ಕಾಡಾನೆಗಳು, ನೇರವಾಗಿ ಆದಿವಾಸಿ ಬುಡಕಟ್ಟು ಜನಾಂಗದ ಮನೆಗಳಿಗೆ ನುಗ್ಗುತ್ತಿವೆ. ಹೀಗಾಗಿ ಜನರು ಬದುಕುವುದೇ ದುಸ್ಥರವಾಗಿದೆ.
ಕಾಡಾನೆಗಳ ದಾಳಿ ತಪ್ಪಿಸಲು ಕೆಲ ತಿಂಗಳುಗಳ ಕಾಲ ಗ್ರಾಮಕ್ಕೆ ಅರಣ್ಯ ರಕ್ಷಕರನ್ನು ನೇಮಿಸಿತ್ತು. ಕಾಡಾನೆಗಳು ಬಂದಾಗ ಪಟಾಕಿ ಸಿಡಿಸಿ ಆನೆಗಳ ಓಡಿಸಲು ಪ್ರಯತ್ನಿಸುತ್ತಿದ್ದರು. ಅದಕ್ಕೂ ಕೇರ್ ಮಾಡದ ಕಾಡಾನೆಗಳು ಮನೆಗಳಿಗೆ ನುಗ್ಗಿ ಮನೆಯಲ್ಲಿರುವ ಅಕ್ಕಿ, ಬೆಲ್ಲ, ಉಪ್ಪು ಸೇರಿದಂತೆ ಆಹಾರ ಧಾನ್ಯಗಳನ್ನು ತಿನ್ನುತ್ತಿದ್ದವು. ಜೊತೆಗೆ ಮನೆಯೊಳಗಿರುವ ಎಲ್ಲ ವಸ್ತುಗಳನ್ನು ತುಳಿದು ದಾಂಧಲೆ ಮಾಡಿ ನಾಶಮಾಡುತ್ತಿದ್ದವು. ಆನೆಗಳು ನುಗ್ಗುವ ಮನೆಗಳು ಚಿಕ್ಕದಾಗಿದ್ದು, ಅವುಗಳಿಗೆ ಒಂದೇ ಬಾಗಿಲು ಇರುತ್ತದೆ. ಆದೇ ಬಾಗಿಲನ್ನು ಮುರಿದುಕೊಂಡು ಮನೆಯೊಳಕ್ಕೆ ನುಗ್ಗಿದರೆ, ಅಲ್ಲಿಂದ ತಪ್ಪಿಸಿಕೊಳ್ಳಲು ಜನರಿಗೆ ಜಾಗವಿರುವುದಿಲ್ಲ. ಆನೆಗಳು ಮನೆಗಳಿಗೆ ನುಗ್ಗಿದರೆ ಮೂಲೆಯಲ್ಲಿ ಕುಳಿತುಕೊಳ್ಳಬೇಕು. ಒಂದು ವೇಳೆ ಅನಾಹುತ ಸಂಭವಿಸಿದರೆ, ಆನೆಗಳಿಗೆ ಸಿಕ್ಕಿ ಸಾಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.
ಕಾಡಾನೆಗಳ ಉಪಟಳ ತಪಿಸಲು ಅರಣ್ಯ ಇಲಾಖೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಾಕಾನೆಗಳನ್ನು ನಿಯೋಜಿಸಿದೆ. ಕಾಡಾನೆಗಳನ್ನು ಹಿಡಿಯುವುದರಲ್ಲಿ ಪಳಗಿರುವ ಆನೆಗಳಾದ ಮತ್ತಿಗೋಡು ಸಾಕಾನೆ ಶಿಬಿರದ ಶ್ರೀಕಂಠ ಮತ್ತು ಭೀಮಾ ಆನೆಗಳನ್ನು ಬಸವನಹಳ್ಳಿಗೆ ನಿಯೋಜಿಸಲಾಗಿದೆ. ಮುವತ್ತೆರಡು ಮನೆಗಳಿರುವ ಗ್ರಾಮ ಮತ್ತು ತಿತಿಮತಿ ಅಂಚಿನಲ್ಲಿ ಪ್ರತೀ ರಾತ್ರಿ ಎರಡು ಆನೆಗಳು ಕಾವಲು ಕಾಯುತ್ತಿವೆ.
ಸಾಕಾನೆಗಳನ್ನು ಏರುವ ಮಾವುತರು ರಾತ್ರಿ ಇಡೀ ಕಾವಲಿದ್ದು, ಕಾಡಾನೆಗಳು ಬಂದಲ್ಲಿ ಸಾಕಾನೆಗಳಿಂದ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಾಡಾನೆಗಳನ್ನು ಓಡಿಸುವುದಕ್ಕೆ ಸಾಕಾನೆಗಳನ್ನು ಕಾವಲಿಗೆ ನಿಯೋಜನೆ ಮಾಡಿರುವುದು ಸ್ಥಳೀಯರನ್ನು ಮತ್ತಷ್ಟು ಸಿಟ್ಟಿಗೇಳಿಸಿದೆ. ರಾತ್ರಿ ಬರುತ್ತಿರುವ ಕಾಡಾನೆಗಳು ಕಾವಲಿಗೆ ಹಾಕಿರುವ ಸಾಕಾನೆಗಳ ಮೇಲೆ ದಾಳಿ ಮಾಡಲು ಮುಂದಾಗುತ್ತಿವೆ. ಎಷ್ಟು ದಿನ ಈ ರೀತಿ ಸಾಕಾನೆಗಳಿಂದ ಕಾವಲು ನೀಡಲು ಸಾಧ್ಯ. ಇದಕ್ಕೆ ಬದಲಾಗಿ ಗ್ರಾಮದ ಸುತ್ತ ಸೋಲಾರ್ ಬೇಲಿ ನಿರ್ಮಿಸುವಂತೆ ಜನರು ಆಗ್ರಹಿಸಿದ್ದಾರೆ.